ಕನ್ನಡ ಕವಿಗಳ ಮಾಹಿತಿ                                                                                                                                                                          ಮುಂದಿನಪುಟಕ್ಕೆ 

ಅಕ್ಕಮಹಾದೇವಿ
ವಚನಕಾರರಲ್ಲಿ ಬಸವಣ್ಣನವರು ಹೇಗೆ ಅಗ್ರಗಣ್ಯರೋ ಹಾಗೆ ವಚನಕಾರ್ತಿಯಲ್ಲಿ ಅಕ್ಕಮಹಾದೇವಿ ಅಗ್ರಗಣ್ಯೆ. ಅವಳು ಪ್ರಸ್ತಿದ್ಧ ಕವಯಿತ್ರಿ ಕೂಡ. ಶಿವಶರಣೆಯರಲ್ಲಿ ಅವಳು ಬೆಳ್ಳಿ ಚುಕ್ಕೆ. ಅಕ್ಕಮಹಾದೇವಿ ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದವಳು. ತಂದೆ ನಿರ್ಮಲಶೆಟ್ಟಿ; ತಾಯಿ ಸುಮತಿ. ಬಾಲ್ಯದಿಂದಲೂ ಶಿವಭಕ್ತೆಯಾಗಿ ಬೆಳೆದಳು. ಚೆನ್ನಮಲ್ಲಿಕಾರ್ಜುನನ್ನನ್ನೇ ತನ್ನ ಪತಿಯೆಂದು ಭಾವಿಸಿ ಪೂಜಿಸಿದ ಪರಮಭಕ್ತೆ. ದಿವ್ಯಸುಂದರಿಯಾದ ಅಕ್ಕಳನ್ನು ನೋಡಿದ ಉಡುತಡಿಯ ರಾಜ ಕೌಶಿಕನಿಗೆ ಅಕ್ಕಳನ್ನು ಕೊಡಲು ತಂದೆ ನಿರ್ಮಲಶೆಟ್ಟಿ ಹೆದರಿದನು. ಆದರೆ ರಾಜನ ಕೋಪಕ್ಕೆ ಹೆದರಿ ಒಪ್ಪಿಗೆ ಸೂಚಿಸಿದನು. ಆಗ ಅಕ್ಕಳು ನಾನು ಲಿಂಗಧಾರಿ, ಲಿಂಗಮುಖಿ, ಲಿಂಗ ಪೂಜಕಳು, ಭವಿಯಾದ ಕೌಶಿಕನು ಭಕ್ತನಾಗಬೇಕು. ನನ್ನ ಲಿಂಪಪೂಜೆಗೆ ಅಡ್ಡಿ ಮಾಡಬಾರದು. ನಾನು ಶರಣ ಸತಿ ಲಿಂಗಪತಿ ಎಂಬುದನ್ನು ಮರೆಯಬಾರದು ನನ್ನು ಗುರು ಜಂಗಮರ ಸೇವೆ ನಿರಂತರವಾಗಿ ನಡೆಯಬೇಕು. ಬೊಕ್ಕಸದ ಧನಕನಗಳು ವಿನಿಯೋಗಿಸಬೇಕು ಈ ಮೂರು ನುಡಿಗಳನ್ನು ಕೌಶಿಕನು ಪಾಲಿಸಬೇಕು ಇವುಗಳನ್ನು ಪಾಲಿಸದಿದ್ದರೆ ನಾನು ಅವರನ್ನು ತೊರೆಯುವೆ ಎಂಬ ಷರತ್ತನ್ನು ಒಡ್ಡಿ ಕೌಶಿಕನನ್ನು ವಿವಾಹವಾದಳು. ಆದರೆ ಕಾಮುಕನಾದ ಕೌಶಿಕ ಆ ಮೂರು ನುಡಿಗಳನ್ನು ತಪ್ಪಿದ್ದರಿಂದ ವಿಚಾರ ಸ್ವಾತಂತ್ರ್ಯ ಮಹಿಳೆಯಾದ ಅಕ್ಕ ಕೌಶಿಕನನ್ನು ತೊರೆದು ನಿರ್ವಸ್ತ್ರಳಾಗಿ, ತನ್ನ ತಲೆಗೂದಲಿನಿಂದ ತನ್ನ ಮೈಯನ್ನು ಮುಚ್ಚಿಕೊಂಡು ದಿಗಂಬರೆಯಾಗಿ, ಕೇಶಾಂಬರಿಯಾಗಿ ಕಲ್ಯಾಣದತ್ತ ಹೊರಟಳು. ಅಲ್ಲಿ ಶಿವಶರಣರು ಒಡ್ಡಿದ ಎಲ್ಲಾ ಸತ್ವ ಪರೀಕ್ಷೆಗಳಲ್ಲಿ ಗೆದ್ದು ಅನುಭವ ಮಂಟಪದ ಸದಸ್ಯಳಾದಳು. ಕೆಲವು ಕಾಲ ಕಲ್ಯಾಣದಲ್ಲಿದ್ದು ನಂತರ ತನ್ನ ಇಷ್ಟ ದೇವರಾದ ಚನ್ನಮಲ್ಲಿಕಾರ್ಜುನನ್ನನ್ನು ಅರಸುತ್ತಾ ಶ್ರೀಶೈಲದತ್ತ ಹೊರಟಳು. ಕೊನೆಗೆ ಅಕ್ಕಳು ಶ್ರೀಶೈಲದ ಕದಳಿವನದಲ್ಲಿ ಶಿವೈಕ್ಯಳಾದಳು.ಅಕ್ಕಮಹಾದೇವಿಯು ಶ್ರೇಷ್ಠ ವಚನಗಾರ್ತಿ, ಕವಿಯತ್ರಿ, ಅವಳ ಸುಮಾರು ೪೩೪ ವಚನಗಳು ಲಭ್ಯವಾಗಿವೆ. ಇದರ ಜೊತೆಗೆ ೬೭ ತ್ರಿಪದಿಗಳನ್ನು ಒಳಗೊಂಡ ಯೋಗಾಂಗ ತ್ರಿಪದಿ ಎಂಬ ತಾತ್ವಿಕ ಗ್ರಂಥವನ್ನು ಬರೆದಿದ್ದಾಳೆ. ಇದು ಅಕ್ಕಳು ಯೋಗಾಂಗ ಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕೊಡುಗೆ. ಅಕ್ಕನ ವಚನಗಳಲ್ಲಿ ವೈರಾಗ್ಯ ಕಂಡು ಬಂದಿದೆ. ಅವನ್ನು ತನ್ನ ಇಷ್ಟದೇವರಾದ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿದ್ದಾಳೆ. ಅವುಗಳಲ್ಲಿ ಆಧ್ಯಾತ್ಮಿಕ ಹಾಗೂ ಶೃಂಗಾರವನ್ನು ಸಮನ್ವಯಗೊಳಿಸಿದ್ದಾಳೆ. ನೋವು, ನಲಿವು, ವೈರಾಗ್ಯ, ವಿರಕ್ತಿ ಅಂಶಗಳನ್ನು ಅಭಿವ್ಯಕ್ತಿಗೊಳಿಸಿದ್ದಾಳೆ. ರಮ್ಯತೆ ಅವಳ ವಚನಗಳಲ್ಲಿ ಎದ್ದು ಕಾಣುವ ಅಂಶ.

ಪುರಂದರದಾಸರು
ದಾಸ ಶ್ರೇಷ್ಠ; ಹಿರಿಯ ಭಕ್ತ ಕವಿ ಪುರಂದರದಾಸರು ೧೪೮೪ರಲ್ಲಿ ಪುರಂದರಗಡದಲ್ಲಿ ಜನಿಸಿದರು. ಮೊದಲನೆಯ ಹೆಸರು ಶ್ರೀನಿವಾಸ. ತಂದೆ ವರದಪ್ಪ; ಶ್ರೀಮಂತರಾಗಿದ್ದರು. ಸಿರಿತನದಲ್ಲಿ ಬೆಳೆದು ಯಾವುದೋ ಒಂದು ಸಂದರ್ಭದಲ್ಲಿ ವೈರಾಗ್ಯ ಹುಟ್ಟಿ ತನ್ನ ಐಶ್ವರ್ಯವನ್ನು ಬಡವರಿಗೆ ದಾವಮಾಡಿ ವ್ಯಾಸರಾಯನಿಂದ ದೀಕ್ಷೆ ಪಡೆದು ಪುರಂದರದಾಸರಾದರು. ಸಾನ ಮಾಡಬೇಡ, ಸಾಲದೆನ್ನಬೇಡ, ನಾಳಿಗಿಡಬೇಡ ಎಂಬ ಜೀವನಾದರ್ಶ ಹೊಂದಿದವರು.
ದೇಶ ತಿರುಗಿ ಲೋಕಾನುಭವ ಪಡೆದು ಭಕ್ತಿ, ಭಾವ, ಹಾಸ್ಯ ವಿಡಂಬನೆ ಎಂಬ ನಾಮ ಮಹಿಮೆ, ಅಂತರಂಗ ವಿವೇದನೆ, ಚಿಂತನೆ, ವಿಮರ್ಶೆಗಳಂತಹ ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿದರೆಂಬ ಹೆಗ್ಗಳಿಕೆ ಇದೆ. ಇಲ್ಲಿಯವರೆಗೂ ಸಾವಿರದಷ್ಟು ಕೀರ್ತನೆಗಳು ದೊರೆತು ಪ್ರಕಟವಾಗಿದೆ. ಇಂತಹ ಹಲವಾರು ಭಕ್ತಿಪೂರಿತ ಕೀರ್ತನೆಗಳನ್ನು ರಚಿಸಿದ ದಾಸರೆಂದರೆ ಪುರಂದರದಾಸರಯ್ಯ ಎಂದು ವ್ಯಾಸರಾಯರಿಂದ ಹೊಗಳಿಸಿಕೊಂಡಿದ್ದಾರೆ.
ಇವರ ಕೀರ್ತನೆಗಳೆಂದರೆ; ಜೀವ ನಾನ್ಯಾಕೆ ಬಡವನು? ನಾನ್ಯಾಕೆ ಪರದೇಶಿ? ಶ್ರೀನಿಧೇಹರಿಯೆನಗೆ ನೀನಿರುವ ತನಕ, ಆರು ಹಿತವರು ನಿನಗೆ ಈ ಮೂವರೊಳಗೆ? ಯಾರು ಆ ಮೂವರು? ನಾರಿಯೋ ಧಾರುಣಿಯೋ, ಬಲುಧನದ ಸಿರಿಯೋ? 'ನಗೆಯು ಬರುತಿದೆ ಎನಗೆ ನಗೆಯ ಬರುತಿದೆ ಜಗದೊಳಿರುವ ಜಾಣರೆಲ್ಲ ಹಗರಣ ಮಾಡುವುದ ಕಂಡು, ಸ್ನಾನ ಮಾಡಿರೋ, ಜ್ಞಾನ ತೀರ್ಥದಲ್ಲಿ, ಈಸಬೇಕು ಇದ್ದು ಜೈಸಬೇಕು, ಹೇಸಿಗೆ ಸಂಸಾರದಲ್ಲಿ ಆಶೆ ಲೇಶ ಮಾಡದ್ಹಂಗ, ಕಷ್ಟ ಸುಖಗಳು ಬಂದಾಗ ಚಲವಿಚಲಿತನಾಗದೆ ಕಲ್ಲಾಗಿ ಇರಬೇಕು. ಮಾನವ ಜನ್ಮ ದೊಡ್ಡದು, ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ, ಹೂವ ತರುವರ ಮನೆಗೆ ಹುಲ್ಲು ತರುವ, ಭಾಗ್ಯದ ಲಕ್ಷ್ಮಿ ಬಾರಮ್ಮ, ಗೆಜ್ಜೆ ಕಾಲ್ಗಳ ಧ್ವನಿಯ ತೋರುವ ಹೆಜ್ಜೆಯನಿಕ್ಕುತ ಸಜ್ಜನ ಸಾಧು ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ, ಬಂದದ್ದೆಲ್ಲಾ ಬರಲಿ ಗೋವಿಂದನ ದಯ ನಮಗಿರಲಿ, ಅಪರಾಧಿ ನಾನಲ್ಲ, ಅಪರಾಧ ಎನಗಿಲ್ಲ, ಬೈಲಿಗೆ ಬೈಲಾಗಿತು ಬೈಲೊಳಗೆ ಕಲ್ಲು ಸಕ್ಕರೆ ಕೊಳ್ಳಿರೊ ಇಂತಹ ಕೀರ್ತನೆಗಳನ್ನಲ್ಲದೆ ಹಲವಾರು ಸುಳಾದಿಗಳನ್ನು ಉಗಾಭೋಗಗಳನ್ನು ರಚಿಸಿದ್ದಾರೆ.
ಸಮಾಜ ಜೀವನ, ಸಂಸಾರ, ವೈರಾಗ್ಯ ಜೀವನ ನಿಷ್ಠ ಡಾಂಭಿಕತೆ, ಅನೀತಿ, ಸಮಾಜದ ಕಟು ವಿಮರ್ಶೆ, ಭಕ್ತಿ ಭಾವಗಳ ಸಂಗಮವನ್ನು ಒಳಗೊಂಡ ಕೀರ್ತನೆಗಳನ್ನು ಪುರಂದರ ವಿಠಲ ಎಂಬ ಅಂಕಿತದಿಂದ ರಚಿಸಿ ಕರ್ನಾಟಕ ಸಂಗೀತಶಾಸ್ತ್ರಕ್ಕೆ ಕೊಟ್ಟ ಸಾಹಿತ್ಯ ಸೇವೆ ಅತ್ಯಮೂಲ್ಯವಾಗಿದೆ.

ಬಸವಣ್ಣ
ಹನ್ನೆರಡನೆಯ ಶತಮಾನದಲ್ಲಿ ಕಂಡುಬರುವ ಹಿರಿಯ ವಚನಕಾರ, ಭಕ್ತ ಕ್ರಾಂತಿಯೋಗಿ, ರಾಜಕೀಯ ನೇತಾರ, ಸಮಾಜ ಸುಧಾರಕನಾಗಿ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿ ಲಿಂಗಾಯುತ ಧರ್ಮವನ್ನು ಅಭಿವೃದ್ಧಿಪಡಿಸಿದ ವಿಶ್ವಚೇತನ ಇವರು. ಬಸವಣ್ಣ ಬಿಜಾಪುರ ಜಿಲ್ಲೆಯ ಬಾಗೇವಾಡಿಯ ಸಮೀಪ ಇಂಗಳೇಶ್ವರದಲ್ಲಿ ೧೩೧೧ರಲ್ಲಿ ಜನಿಸಿದರು. ತಂದೆ ಮಾದರಸ. ತಾಯಿ ಮಾದಲಾಂಬಿಕೆ. ಸೋದರ ಮಾವ ಬಲದೇವನ ನೆರವಿನಿಂದ ವಿದ್ಯಾಭ್ಯಾಸ ಪಡೆದು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿ ಪದವಿ ಪಡೆದು ಧರ್ಮ ರಾಜಕೀಯ, ಸಾಮಾಜಿಕ, ಸಾಹಿತ್ಯಕ ಕ್ರಾಂತಿಯನ್ನು ಮಾಡಿ ಸಮಾಜವನ್ನು ಸುಧಾರಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ.
ಹತ್ತನೇ ಶತಮಾನದಲ್ಲಿ ಅರಮನೆಗಳಲ್ಲಿ ರಾರಾಜಿಸುತ್ತಿದ್ದ ಪಂಡಿತರಿಗೆ ಮೀಸಲಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಂದು ಸರಳವಾದ ಗದ್ಯ ಪದ್ಯವಲ್ಲದ ವಿಶಿಷ್ಟ ಶೈಲಿಯ ಸಾಹಿತ್ಯ ಪ್ರಕಾರವನ್ನು ಪ್ರಚುರಪಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಶರಣರನ್ನು ಆವ್ಹಾನಿಸಿ ಕಲ್ಯಾಣವನ್ನು ಕೇಂದ್ರವಾಗಿಟ್ಟುಕೊಮಡು ಅಪಾರ ಅನುಭವದ ಮೂಲಕ ವಿಷಯ ಚರ್ಚಿಸಿ ನಂತರ ಇವರ ವಚನ ಕಮ್ಮಟದಲ್ಲಿ ಅಚ್ಚೊತ್ತಿದ ವಚನಗಳು ಸಮಾಜದ ಶ್ರೇಯಸ್ಸಿಗೆ ಕಾರಣವಾಗಿದೆ. ವಿಶಿಷ್ಟ ಪ್ರಕಾರದ ಸಾಹಿತ್ಯ ನಿರ್ಮಾಣವಾಗಿದೆ. ಬಸವಣ್ಣನವರಿಂದ ರಚಿತವಾದ ಷಟ್ ಸ್ಥಳದ ವಚನಗಳು ಹಾಗೂ ಬೇರೆ ಚನಗಳ ಕೃತಿಗಳು ಪ್ರಮುಖವಾಗಿವೆ. ಅವರ ವಚನಗಳ ಪ್ರಮುಖ ಸಾಲುಗಳನ್ನು ಇಲ್ಲಿ ಗಮನಿಸಬಹುದು.
ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ, ಉಳ್ಳವರು ಶಿವಾಲಯವ ಮಾಡುವರು. ನುಡಿದರೆ ಮುತ್ತಿನ ಹಾರದಂತಿರಬೇಕು. ನಾಳೆ ಬಪ್ಪುದು ನಮಗಿಂದೆ ಬರಲಿ. ದೇವನೊಬ್ಬ ನಾಮ ಹಲವು, ಕಾಸಿ ಕಮ್ಮಾರನಾದ ಬೀಸಿ ಮಡಿವಾಳನಾದ ನೀರ ಕಂಡಲ್ಲಿ ಮುಳುಗುವರಯ್ಯಾ, ಕಾಗೆಯೊಂದಗುಳ ಕಂಡರೆ ಕರೆಯದೆ ತನ್ನ ಬಳಗವನು, ತಂದೆ ನೀನು; ತಾಯಿ ನೀನು, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಹಬ್ಬಕ್ಕೆ ತಂದ ಹರಕೆಯ ಕುರಿ, ಲೋಕದ ಡೊಂಕ ನೀವೇಕೆ ತಿದ್ದುವಿರಿ ಒಲೆ ಹತ್ತಿಯುರಿದಡೆ ನಿಲ್ಲಬಹುದಲ್ಲವೆ, ಇವನಾರವ ಇವನಾರವ ಇವನಾರವ? ನೆಂದೆನಿಸದಿರಯಯ್ ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ.
ಕೂಡಲ ಸಂಗಮದೇವ ಅಂಕಿತದಿಂದ ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ಬಹು ಅಮೂಲ್ಯವಾದ ವಚನಗಳನ್ನು ರಚಿಸಿ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆ ಇವರುದ.
 

ಕುಮಾರವ್ಯಾಸ
ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. ಈಗಿನ ಕುಂದಗೋಳ ತಾಲ್ಲೂಕಿನ ಕೋಳಿವಾಡ ಈತನ ಜನ್ಮಸ್ಥಳ. ಈತನ ಕಾಲ ಕ್ರಿ.ಶ. ೧೪೩೦. ಗದುಗಿನ ವೀರ ನಾರಾಯಣಸ್ವಾಮಿ ಈತನ ಆರಾಧ್ಯ ದೈವ. ತಂದೆ ಲಕ್ಕರಸ. ವಿಜಯನಗರದ ದೇವರಾಯನ ಆಸ್ಥಾನದಲ್ಲಿ ಈತನ ತಂದೆ ಮಂತ್ರಿಯಾಗಿದ್ದನೆಂದು ವಿದ್ವಾಂಸರ ಅಭಿಪ್ರಾಯ. ಈತನಿಗೆ ಐದು ಜನಗಂಡು ಮಕ್ಕಳಲ್ಲಿ ನಾರಣಪ್ಪನೇ ಹಿರಿಯನೆಂದು ತಿಳಿದುಬರುತ್ತದೆ. ಕುಮಾರವ್ಯಾಸನು ಕರ್ಣಾಟ ಭಾರತ ಕಥಾಮಂಜರಿ ಯನ್ನು ಗದುಗಿನ ವೀರನಾರಾಯಣ ಸ್ವಾಮಿ ದೇವಾಲಯದಲ್ಲಿ ಕುಳಿತು ಬರೆದನೆಂದು ತಿಳಿದುಬರುತ್ತದೆ.
ಕರ್ಣಾಭಾರತ ಕಥಾಮಂಜರಿಯನ್ನು ಗದುಗಿನ ಭಾರತ ವೆಂತಲೂ ಕರೆಯುತ್ತಾರೆ. ಗದುಗಿನ ಭಾರತವು ಭಾಮಿನಿ ಷಟ್ಪದಿಯಲ್ಲಿದೆ. ಗದುಗಿನ ಭಾರತವು. ೧೫೨ ಸಂಧಿ, ೮೪೭೯ ಪದ್ಯಗಳು, ಹಾಗೂ ೧೦ ಪರ್ವಗಳನ್ನೊಳಗೊಂಡಿದೆ. ಇದರ ವಿಶಿಷ್ಟ ಅಂಶಗಳೆಂದರೆ ಕರ್ಣ ದುರ್ಯೋಧನರ ಸ್ನೇಹ, ಕೃಷ್ಣ ಕಥೆ, ಕೃಷ್ಣನೇ ಈ ಕೃತಿಯ ನಾಯಕ. ಕುಮಾರವ್ಯಾಸನ ಗದುಗಿನ ಭಾರತವು ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಮಹೋನ್ನತ ಕೃತಿ ಕುಮಾರವ್ಯಾಸನಿಗೆ ರೂಪಕ ಸಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಕೂಡ ಇದೆ.
ಮಹಾಕವಿ ಕುಮಾರವ್ಯಾಸ ಕನ್ನಡ ಸಾಹಿತ್ಯದ ಒಬ್ಬ ಮಹಾಕವಿ. ನಡುಗನ್ನಡ ಕಾಲದ ಮಹತ್ವ ಕವಿ. ಕುಮಾರವ್ಯಾಸ ಭಾಗವತ ಸಂಪ್ರದಾಯದ ಕವಿ.

ಜನ್ನ
ಜನ್ನನು ಹೊಯ್ಸಳ ಅರಸ ವೀರ ನರಸಿಂಹನ ಆಸ್ಥಾನದಲ್ಲಿ ಆಸ್ಥಾನ ಕವಿಯಾಗಿದ್ದನು. ತಂದೆ ಸುಮನೋಬಾಣ, ತಾಯಿ ಗಂಗಾದೇವಿ. ಜನ್ನನು ಯಶೋಧರ ಚರಿತೆ, ಅನಂತ ಪುರಾಣ ಎಂಬ ಎರಡು ಜೈನ ಗ್ರಂಥಗಳನ್ನು ರಚಿಸಿದ್ದಾನೆ. ಈತ ಕವಿ ಚಕ್ರವರ್ತಿ ಎಂಬ ಬಿರುದು ಗಳಿಸಿರುವನು. ಲಕುಮಾದೇವಿ ಜನ್ನನ ಹೆಂಡತಿಯ ಹೆಸರು. ಸೂಕ್ತಿಸುಧಾರ್ಣವ ಮಲ್ಲಿಕಾರ್ಜುನ ಜನ್ನನ ಭಾವ ಕವಿ ಕೇಶಿರಾಜನು ಈ ಮಲ್ಲಿಕಾರ್ಜುನನ ಮಗ.
ಜನ್ನನ ಕೃತಿ ಯಶೋಧರರ ಚರಿತೆಯು ೩೦೦ ಕಂದ ಪದ್ಯಗಳನ್ನೊಳಗೊಂಡಿದ್ದು ನಾಲ್ಕು ಆಶ್ವಾಸಗಳಿಂದ ಕೂಡಿದೆ. ಇಲ್ಲಿಯ ಪದ್ಯಗಳು ಭಾವ
ಪರಿಪೂರ್ಣತೆಯಿಂದ ತುಂಬಿಕೊಂಡಿವೆ. ಜನ್ನನ ಶೈಲಿಯು ಸರಳತೆ, ಲಾಲಿತ್ಯಗಳಿಂದ ಕೂಡಿದ್ದು ಪಾತ್ರಗಳು ಜೀವಂತಪೂರ್ಣವಾಗಿವೆ.
ಜನ್ನನ ಇನ್ನೊಂದು ಕೃತಿಯು ಅನಂತನಾಥ ಪುರಾಣವು ಹದಿನಾಲ್ಕನೆಯ ತೀರ್ಥಂಕರನಾದ ಅನಂತನಾಥನ ಕಥೆ. ೧೪೦೦ ಪದ್ಯಗಳನ್ನೊಳಗೊಂಡಿದ್ದು ೧೪ ಅಶ್ವಾಸಗಳುಳ್ಳ ಚಂಪೂ ಗ್ರಂಥ.
 

ಪೊನ್ನ
ರತ್ನತ್ರಯರಲ್ಲಿ ಎರಡನೆಯಬನೆ ಪೊನ್ನ. ಇವನು ಮುಮ್ಮಡಿ ಕೃಷ್ಣನ ಆಸ್ಥಾನ ಕವಿಯಾಗಿದ್ದನು. ಪಂಪನ ನಾಡಾದ ವೆಂಗಿ ಪ್ರದೇಶವೆ ಈತನ ನಾಡಾಗಿರಬೇಕೆಂದು ವಿದ್ವಾಂಸರ ಅಭಿಪ್ರಾಯ. ಇವನಿಗೆ ಕವಿ ಚಕ್ರವರ್ತಿ ಎಂಬ ಬಿರುದು ಇತ್ತು. ದಾನಚಿಂತಾಮಣಿ ಅತ್ತಿಮಬ್ಬೆಯು ಪೊನ್ನನ ಶಾಂತಿ ಪುರಾಣ ಕೃತಿಯ ಸಾವಿರ ಪ್ರತಿಗಳನ್ನು ಬರೆಯಿಸಿ ದಾನವಾಗಿ ಹಂಚಿದಳು. ಪೊನ್ನನು ತಾನು ಕನ್ನಡದ ಕಾವ್ಯಗಳನ್ನು ಬರೆಯುವುದರಲ್ಲಿ ಅರಸನಿಗಿಂತಲೂ ನೂರು ಪಾಲು ಶ್ರೇಷ್ಠ. ಹಾಗೆಯೇ ಸಂಸ್ಕೃತ ಕಾವ್ಯ ರಚನೆಯಲ್ಲಿ ತಾನೇ ಹೊಗಳಿಕೊಂಡಿದ್ದಾನೆ.
ಪೊನ್ನನು ನಾಲ್ಕು ಕೃತಿಗಳನ್ನು ರಚಿಸಿದ್ದಾನೆ. ಅವುಗಳೆಂದರೆ ; ಶಾಂತಿಪುರಾಣ, ಜಿನಾಕ್ಷರ ಮಾಲೆ, ಭುವನೈಕ್ಯ ರಾಮಾಭ್ಯುದಯ ಮತ್ತು ಗತಪ್ರತ್ಯಾಗತ ಮೊದಲೆರಡು ಕೃತಿಗಳು ಮಾತ್ರ ಲಭ್ಯವಿದ್ದು ಇನ್ನೆರಡು ಕೃತಿಗಳು ಲಭ್ಯವಿಲ್ಲ.
ಶಾಂತಿಪುರಾಣ ಕೃತಿಯ ಹನ್ನೆರಡು ಆಶ್ವಾಸಗಳಿಂದ ಕೂಡಿರುವ ಕೃತಿ ಇದು ಐದನೆಯ ಚಕ್ರವರ್ತಿಯೂ ಹನ್ನೊಂದನೆಯ ತೀರ್ಥಂಕರನೂ ಆದ ಶಾಂತಿನಾಥನ ಜೀವನ ವೃತಾಂತವನ್ನೊಳಗೊಂಡ ಕೃತಿ.
ಜಿನಾಕ್ಷರ ಮಾಲೆ ಚಿಕ್ಕ ಕೃತಿ. ಈ ಕೃತಿಯಲ್ಲಿ ಕ ಕಾರದಿಂದ ಳ ಕಾರದವರೆಗಿನ ಅಕ್ಷರಗಳಿಂದ ಪ್ರಾರಂಭವಾಗುವಂತೆ ೩೯ ಕಂದ ಪದ್ಯಗಳಲ್ಲಿ ಜಿನ ಸ್ತೋತ್ರವನ್ನು ಮಾಡಲಾಗಿದೆ.
 

ರಾಘವಾಂಕ
ಹರಿಹರನ ಶಿಷ್ಯ ಹಾಗೂ ಸೋದರಳಿಯನಾದ ರಾಘವಾಂಕನು ೧೨೨೫ರಲ್ಲಿ ಹಂಪಿಯಲ್ಲಿ ಜೀವಿಸಿದ್ದನು. ಇವನ ಬಗೆಗೆ ಒಂದು ದಂತಕತೆಯನ್ನು ಹೆಣೆಯಲಾಗಿದೆ. ಹರಿಶ್ಚಂದ್ರ ಕಾವ್ಯವನ್ನು ಬರೆದು ನರಸ್ತುತಿ ಮಾಡಿದಾಗ ಹರಿಹರ ಕೋಪದಿಂದ ಹೊಡೆದಾಗ ರಾಘವಾಂಕನ ಐದು ಹಲ್ಲುಗಳು ಉದುರಿ ಹೋದವು. ಮುಂದೆ ಐದು ಶೈವಕೃತಿ ಬರೆದ ಮೇಲೆ ಹರಿಹರನು ಮುಂದೆ ಹಲ್ಲುಗಳನ್ನು ಕೊಟ್ಟ ಕತೆ ಒಂದು ದಂತಕತೆಯಾಗಿದೆ.
ಸೌರಾಷ್ಟ್ರದಿಂದ ಆದಯ್ಯನು ಪುಲಿಗೆರೆಗೆ ಬಂದು ಅಲ್ಲಿಯ ಸೋಮನಾಥನನ್ನು ಇಲ್ಲಿ ಪ್ರತಿಷ್ಠಾಪಿಸಿ ಕೆಲವು ಪವಾಡಗಳನ್ನು ಮಾಡಿ ಜೈನರನ್ನು ಶಿವಭಕ್ತರನ್ನಾಗಿ ಮಾಡಿದ ಕಥೆ ಸೋಮನಾಥ ಚರಿತ್ರೆಯಾಗಿದೆ ಶಿವನ ಕೋಪದಿಂದ ಹುಟ್ಟಿ ಬಂದ ವೀರಭದ್ರನು ದಕ್ಷ ಯಜ್ಞವನ್ನು ನಾಶ ಮಾಡಿದ ರೌದ್ರರಸ ಪ್ರಧನವಾದ ವಿರೇಶಚರಿತೆ ಉದ್ದಂಡ ಷಟ್ಪದಿಯ ೧೨೭ ಪದ್ಯವನ್ನು ಒಳಗೊಂಡ ಚಿಕ್ಕ ಕಾವ್ಯವಾಗಿದೆ. ಸೊನ್ನಲಿಗೆ ಸಿದ್ದರಾಮನ ಚರಿತ್ರೆಯನ್ನು ಒಳಗೊಂಡ ಸಿದ್ದರಾಮ ಚರಿತ್ರೆ ಒಂಬತ್ತು ಸಂಧಿಯುಳ್ಳ ವಾರ್ಧಕ ಷಟ್ಪದಿಯ ಮಹಾನ್ ಕಾವ್ಯ. ಸಿದ್ಧರಾಮನನ್ನು ಕಳೆದುಕೊಂಡು ಸಂಕಟಪಡುವ ಕರುಣೆ ಮಲ್ಲಿನಾಥನನ್ನು ಅರುಸುತ್ತಿರುವ ಸಿದ್ದರಾಮನ ಭಕ್ತಿ ಇಲ್ಲಿ ಎರಡು ರಸ ಹರಿದಾಡಿದೆ. ರಾಘವಾಂಕನ ಷಟ್ಪದಿ ಕಾವ್ಯಗಳಲ್ಲಿ ಮೊದಲನೆಯದಾದ ಹರಿಶ್ಚಂದ್ರ ಮಹಾರಾಜಯ ಸತ್ಯವನ್ನು ಒರೆಗಚ್ಚುವ ಇದರ ಕಥಾವಸ್ತು ಎಲ್ಲರ ಮನ ಸೆಳೆಯುವುದಾಗಿದೆ. ಇವನ ಶರಭ ಚರಿತ್ರೆ ದೊರೆತಿದ್ದು ಇನ್ನೂ ಪ್ರಕಟವಾಗಿಲ್ಲ. ಹರಿಹರ ಮಹತ್ವ ಈ ಕೃತಿ ಇನ್ನೂವರೆಗೂ ದೊರೆತಿಲ್ಲ.
ಇಂತಹ ಅಮೂಲ್ಯ ಕೃತಿಗಳನ್ನು ರಚಿಸಿದ ರಾಘವಾಂಕ ಷಟ್ಪದಿ ಬ್ರಹ್ಮ, ಉಭಯಕವಿ ಕಮಲರವಿ, ಕವಿ ಶರಭ ಬೇರುಂಡ, ಆದಟಕವಿ ಹೀಗೆ ಹಲವಾರು ಬಿರುದುಗಳನ್ನು ಪಡೆದಿದ್ದನು.

ಮಧುರಚೆನ್ನ
ಮಧುರ ಚೆನ್ನರು ೧೯೦೩ರ ಜುಲೈ ೩೧ ರಂದು ವಿಜಾಪುರದ ಜಿಲ್ಲೆಯ ಹಲಸಂಗಿಯ ಸಮೀಪದ ಹಿರೇಲೋಣಿಯಲ್ಲಿ ಜನಿಸಿದರು. ಇವರ ಹೆಸರು ಚೆನ್ನಮಲ್ಲಪ್ಪ ಗಲಗಲಿ. ಮಧುರ ಚೆನ್ನ ಎಂಬುದು ಇವರ ಕಾವ್ಯನಾಮ. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ, ಇಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ ೧೯೨೧ರಲ್ಲಿ ಪ್ರಥಮ ಸ್ಥಾನದಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಇವರ ಶಿಕ್ಷಣ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಇವರ ಶಿಕ್ಷಣ ಇಲ್ಲಿಗೆ ಅಂತ್ಯಗೊಂಡಿತ್ತು. ಸಾಹಿತ್ಯದ ಕಡೆಗೆ ಇವರ ಮನಸ್ಸು ಒಲವು ತೋರಿದ್ದರಿಂದ ಸಾಹಿತ್ಯಕ್ಕೆ ಇವರ ಮನಸ್ಸು ಒಲಿಯಿತು. ಓದಿನಲ್ಲಿ ವಿಪರೀತ ಆಸಕ್ತಿ ಹುಟ್ಟಿದ್ದರಿಂದ ಸ್ವತಂತ್ರವಾಗಿ ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳನ್ನು ಕಲಿತರು.
ಮಧುರ ಚೆನ್ನರು ತತ್ವಶಾಸ್ತ್ರ, ಇತಿಹಾಸ, ಸಾಹಿತ್ಯ, ಭಾಷಾಶಾಸ್ತ್ರ, ಜಾನಪದ ಮುಂತಾದ ವಿಷಯಗಳನ್ನು ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವರು ಅನೇಕ ಜನಪದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಇವರು ಜನಪದ ಗೀತೆಗಳನ್ನು ಹಾಡುವುದರಲ್ಲೂ ನಿಸ್ಸೀಮರಾಗಿದ್ದರು.
ಹಲಸಂಗಿಯಲ್ಲಿ ಮಧುರ ಚೆನ್ನರು ತಮ್ಮ ಸ್ನೇಹಿತರ ನೆರವಿನಿಂದ ಶ್ರೀ ಅರವಿಂದ ಮಂಡಳಿ ಎಂಬ ಸಂಸ್ಥೆ ಸ್ಥಾಪಿಸಿ ಅದರ ಮುಖಾಂತರ ಅರವಿಂದರ ತತ್ವಗಳ ಪ್ರಚಾರ ಮತ್ತು ಸಾಹಿತ್ಯ ಚಟುವಟಿಕೆಗಳನ್ನು, ಗ್ರಂಥ ಪ್ರಕಟಣೆಗಳನ್ನು ನಿರ್ವಹಿಸಿದರು. ಮಧುರಚೆನ್ನರು ಆಗಸ್ಟ್ ೧೫, ೧೯೫೩ರಂದು ನಿಧನ ಹೊಂದಿದರು.
ಕೃತಿಗಳು
ಪೂರ್ವರಂಗ (೧೯೩೨), ಕಾಳರಾತ್ರಿ (೧೯೩೩), ನನ್ನ ನಲ್ಲ (೧೯೩೩), ಆತ್ಮ ಸಂಶೋಧನೆ (೧೯೩೫), ಬೆಳಕು (೧೯೩೭) ಪೂರ್ಣಯೋಗದ ಫಥದಲ್ಲಿ, ಕನ್ನಡಿಗರ ಕುಲಗುರು, ವಿಸರ್ಜನ (ಅನುವಾದ), ಮಾತೃವಾಣಿ (ಅನುವಾದ), ವಿನೋದ ಕುಸುಮಾವಳಿ (ಕವನ ಸಂಕಲನ)
ಮಧುರ ಚೆನ್ನರದು ಅಪರೂಪದ ವ್ಯಕ್ತಿತ್ವ, ಅನುಭವದ ಸಾಧನೆ, ಸಾಹಿತ್ಯಿಕ ಹಿರಿಮೆ, ಸ್ನೇಹಿತರ ಬಾಂದವ್ಯದಿಂದ ಅಪರೂಪದ ಸಾಹಿತ್ಯಿಕ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ ಕೀರ್ತಿ ಇವರದು. ನನ್ನ ನಲ್ಲ ಕೃತಿಯಲ್ಲಿ ತಮ್ಮ ಆತ್ಮಕಥನವನ್ನು ಮಧುರಚೆನ್ನರು ಬಿಂಬಿಸಿದ್ದಾರೆ.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೫೦ರಲ್ಲಿ ಸೊಲ್ಲಾಪುರದಲ್ಲಿ ನಡೆದ ೩೩ನೇ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಇವರು ಅಧ್ಯಕ್ಷರಾಗಿದ್ದರು.
 

ಅಲ್ಲಮಪ್ರಭು
ಅಲ್ಲಮಪ್ರಭು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆ ಊರಿನವರು. ಹನ್ನರೆಡನೆಯ ಶತಮಾನದ ಶರಣರಲ್ಲಿಯೇ ಶ್ರೇಷ್ಠ ಚನಕಾರರು. ಇವರ ತಂದೆ ನಿರಂಹಕಾರ, ತಾಯಿ ಸುಜ್ಞಾನಿ. ಶೈವ ದಂಪತಿಗಳು. ಬಸವಣ್ಣನವರ ಹಿರಿಯ ಸಮಕಾಲೀನ ವಚನಕಾರರಲ್ಲಿ ಇವರು ಅಗ್ರಗಣ್ಯ. ಏಕಾಂತದ ರಾಮಯ್ಯ, ಸಕಲೇಶ ಮಾದರಸ, ಮಡಿವಾಳ ಮಾಚಯ್ಯ ಇವರುಗಳು ಅಲ್ಲಮನ ಅನುಭವದಿಂದಾಗಿ ಪ್ರದೀಪ್ತವಾಗಿದ್ದರು. ಅವರೆಲ್ಲರೂ ದೀಪಗಳಂತೆ ಪ್ರಜ್ವಲಿಸುತ್ತಿರುವುದಕ್ಕೆ ಅಲ್ಲಮರೇ ಕಾರಣ. ಇವರು ಯೌವ್ವನದಲ್ಲಿಯೇ ವಿರಕ್ತನಾಗಿ ಆಳವಾದ ಆಧ್ಯಾತ್ಮ ಆತ್ಮ ಚಿಂತನೆಯಿಮದ ದಿವ್ಯಜ್ಞಾನಿಯಾಗಿ ದೇಶ ಸುತ್ತುತ್ತಾ ಕಲ್ಯಾಣಕ್ಕೆ ಬಂದರು. ಕಲ್ಯಾಣದಲ್ಲಿ ಶರಣ ಸಾಧಕರಿಗಾಗಿ ಅನುಭವ ಮಂಟಪವನ್ನು ಬಸವಣ್ಣನವರೊಮದಿಗೆ ಸ್ಥಾಪಿಸಿದರು. ಕಲ್ಯಾಣದ ಶಿವ ಶರಣರನ್ನೆಲ್ಲ ಸಂಘಟಿಸಿದರು. ಅಲ್ಲಮಪ್ರಭುವು ಅನುಭವ ಮಂಟಪದ ಅಧ್ಯಕ್ಷರಾದರು. ಅಲ್ಲಿ ಆಗಾಗ ಶಿವಶರಣದ ಗೋಷ್ಠಿಗಳು ನಡೆಯಲು ಅನುವು ಮಾಡಿಕೊಟ್ಟರು. ಶೂನ್ಯ ಸಿಂಹಾಸನಾಧೀಶನಾದರು. (ಗುಹೇಶ್ವರಾ ಇವರ ಅಂಕಿತನಾಮ) ಇವರ ವಚನಗಳು, ಬೆಡಗಿನ ವಚನಗಳು, ಮಂತ್ರ ಮಹಾತ್ಮೆ ಮತ್ತು ಹಾಡುಗಳನ್ನು ರಚಿಸಿದ್ದಾರೆ. ಅಲ್ಲಮರ ವಚನಗಳು ಈ ಕೆಳಕಂಡಂತಿವೆ.
ಅಲ್ಲಮನ ವಚನಗಳು
೧. ಲಿಂಗದ ಮೇಲೆ ಲಿಂಗ
ಲಿಂಗದ ಮೇಲೆ ಅಂಗವಿದೇನೋ?
ಮನದ ಮೇಲೆ ಅರಿವು
ಅರಿವಿನ ಮೇಲೆ ಕುರುಹಿದೇನೋ?
ನೀನೆಂಬಲ್ಲಿ ನಾನು
ನಾನೆಂಬಲ್ಲಿ ನೀನು
ನೀ-ನಾನೆಂಬುದಕ್ಕೆ ತೆರಹಿಲ್ಲ ಗುಹೇಶ್ವರ.
೨. ಅಂಗವಿಲ್ಲಾಗಿ ಅನ್ಯಸಂಗವಿಲ್ಲಯ್ಯ!
ಅನ್ಯಸಂಗವಿಲ್ಲಾಗಿ ಮತ್ತೊಂದು ವಿವರಿಸಲಿಲ್ಲಯ್ಯ!
ಮತ್ತೊಂದ ವಿವರಿಸಲಿಲ್ಲಾಗಿ ನಿಸ್ಸಂಗವಾಯಿತ್ತಯ್ಯ!
ಗುಹೇಶ್ವರ, ನಿಮ್ಮ ನಾಮವಿಂತಟಯ್ಯ!
೩. ತಮ್ಮ ತಮ್ಮ ಭಾವಕ್ಕೆ ಉಡಿಯಲ್ಲಿ ಕಟ್ಟಿಕೊಂಡರು.
ತಮ್ಮ ತಮ್ಮ ಭಾವಕ್ಕೆ ಕೊರಳಲ್ಲಿ ಕಟ್ಟಿಕೊಂಡನು.
ನಾನೆನ್ನ ಭಾವಕ್ಕೆ ಪೂಜಿಸ ಹೋದರೆ,
ಕೈತಪ್ಪಿ, ಮನದಲ್ಲಿ ಸಿಲುಕಿತೆನ್ನಲಿಂಗ!
ಸಾಧಕನಲ್ಲ, ಭೇದಕನಲ್ಲ!
ಗುಹೇಶ್ವರನೆಲ್ಲಯ್ಯ ತಾನೆ ಬಲ್ಲ.

ಆಲೂರು ವೆಂಕಟರಾಯರು
ಆಲೂರು ವೆಂಕಟರಾಯರು ೧೮೮೦ರ ಜುಲೈ ೧೨ ರಂದು ಬಿಜಾಪುರದಲ್ಲಿ ಜನಸಿದರು. ತಂದೆ ಭೀಮರಾಯ; ತಾಯಿ ಭಾಗೀರಥಿಬಾಯಿ. ತಂದೆ ಸರ್ಕಾರಿ ವೃತ್ತಿಯಲ್ಲಿದುದ್ದರಿಂದ ಇವರ ವಿದ್ಯಾಭ್ಯಾಸ ನವಲಗುಂದ, ಗದಗ, ಹಾನಗಲ್, ಧಾರವಾಡ ಹೀಗೆ ಬೇರೆ ಬೇರೆ ಕಡೆಗಳಲ್ಲಿ ನಡೆಯಿತು.
೧೮೯೭ ರಲ್ಲಿ ವೆಂಕಟರಾಯರು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಶಾಲೆಗೆ ಎರಡನೆಯವರಾಗಿ ಉತ್ತೀರ್ಣರಾದರು. ೧೮೯೯ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜನ್ನು ಆಲೂರರು ಸೇರಿದರು. ಕಾಲೇಜು ವಿದ್ಯಾರ್ಥಿಯಾಗಿಯೂ ಆಲೂರರು ಸಾಧರಣ ಜೀವನವನ್ನು ನಡೆಸುತ್ತಿದ್ದರು. ೧೯೦೩ರಲ್ಲಿ ಬಿ.ಎ. ಪದವಿ ಪಡೆದ ಆಲೂರು ವೆಂಕಟರಾಯರು ಮುಮಬಯಿಯಲ್ಲಿ ಕಾನೂನು ಅಭ್ಯಾಸದಲ್ಲಿ ತೊಡಗಿ ೧೯೦೫ ರಲ್ಲಿ ವಕೀಲರಾದರು. ೧೯೦೮ ರಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೇಳನವನ್ನು ನಡೆಸಿದರು. ಧಾರವಾಡದಲ್ಲಿ ಆ ದಿನಗಳಲ್ಲಿ ಮರಾಠಿಗರ ಪ್ರಾಬಲ್ಯ ಅಧಿಕವಾಗಿದ್ದು ಕನ್ನಡಿಗರಿಗೆ ಬಹಳ ಅನ್ಯಾಯವಾಗುತ್ತಿತ್ತು.
ನಾಡು ನುಡಿ, ಸಂಸ್ಕೃತಿಗಳ ಪ್ರತೀಕವಾಗಿದ್ದ ಅಲೂರು ವೆಂಕಟರಾಯರು ಕಟ್ಟಾ ಕನ್ನಡಾಭಿಮಾನಿಗಳು. ೧೯೧೨ ರಲ್ಲಿ ಆಲೂರು ವೆಂಕಟರಾಯರು ತಮ್ಮ ಕೃತಿ ಕರ್ನಾಟಕ ಗತವೈಭವ ವನ್ನು ಪ್ರಕಟಿಸಿದರು. ಕನ್ನಡಿಗರ ಪಾಲಿಗೆ ಇದೊಂದು ಮಹತ್ವದ ಕೃತಿ. ಅನೇಕ ಕನ್ನಡಿಗರಿಗೆ ತಮ್ಮ ಬೆಲೆ ಏನೆಂಬುದನ್ನು ಕಣ್ದೆರೆಸಿ ತೋರಿಸಿದ ಕೃತಿ ಇದು.
ಕನ್ನಡ ಸಂಸ್ಕೃತಿಯ ಅಧ್ಯಯನಕ್ಕೆ ನಾಡಿನ ಭವ್ಯ ಪರಂಪರೆಯನ್ನು ತಿಳಿಸುವಲ್ಲಿ ಕುತೂಹಲ ಇತ್ತು. ಆನೆಗೊಂದಿ, ಹಂಪೆ ಮೊದಲಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸಂದರ್ಶಿಸಿ ೧೯೧೪ ರಲ್ಲಿ ಧಾರವಾಡದಲ್ಲಿ ಕರ್ನಾಟಕ ಇತಿಹಾಸ ಮಂಡಲ ಸ್ಥಾಪಿಸಿ, ಅದರ ಅಧ್ಯಕ್ಷರಾಗಿ ೧೫ ವರ್ಷಗಳ ಕಾಲ ದುಡಿದರು. ೧೯೨೩ ರಲ್ಲಿ ಜಯ ಕರ್ನಾಟಕ ಪತ್ರಿಕೆ ಪ್ರಾರಂಭಿಸಿದರು.
ತಮ್ಮ ಜೀವನ ಕೊನೆಯವರೆಗೂ ಕ್ರಿಯಾಶೀಲರಾಗಿದ್ದು ನಾಡು ನುಡಿಗಳ ಮೇಲ್ಮೆಯನ್ನೇ ಉಸಿರಾಗಿಸಿಕೊಂಡಿದ್ದ ಆಲೂರು ವೆಂಕಟರಾಯರು ೧೯೬೪ ಫೆಬ್ರವರಿ ೨೫ ರಂದು ನಿಧನರಾದರು.
ಕೃತಿಗಳು
ಶ್ರೀ ವಿದ್ಯಾರಣ್ಯ, ಚರಿತ್ರೆ, ಕರ್ನಾಟಕ ಗತವೈಭವ, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕ ವೀರ ರತ್ನಗಳು, ಕನ್ನಡಿಗರ ಭ್ರಮನಿರಸನ, ಗೀತಾ ಪ್ರಕಾಶ, ಗೀತಾ ಪರಿಮಳ, ಸ್ವಾತಂತ್ರ್ಯ ಸಂಗ್ರಾಮ, ಕರ್ನಾಟಕತ್ವದ ವಿಕಾಸ, ಮಧ್ವ ಸಿದ್ದಾಂತ ಪ್ರೌಏಶಿಕೆ, ತಿಲಕರ ಗೀತಾ ರಹಸ್ಯ ಮೊದಲಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೪೧ ರಲ್ಲಿ ಉತ್ತರ ಕರ್ನಾಟಕದ ಕನ್ನಡಿಗರು ಇವರಿಗೆ ಕರ್ನಾಟಕದ ಕುಲ ಪುರೋಹಿತ ಎಂಬ ಬಿರುದ್ದನ್ನು ನೀಡಿ ಗೌರವಿಸಿದ್ದರು.
೧೯೬೧ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇವರನ್ನು ಗೌರವಿಸಿತು.
೧೯೩೦ ರಲ್ಲಿ ಮೈಸೂರಿನಲ್ಲಿ ನಡೆದ ೧೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು.

ಆದ್ಯ ರಂಗಾಚಾರ್ಯ (ಶ್ರೀ ರಂಗ)
ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರ್‌ದಾರ್. ಶ್ರೀರಂಗ ಎಂಬ ಕಾವ್ಯನಾಮದಿಂದ ಸುಪ್ರಸಿದ್ದರು. ಇವರು ೧೯೦೪ರ ಸೆಪ್ಟೆಂಬರ್ ೨೬ ರಂದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡದಲ್ಲಿ ಜನಿಸಿದರು. ತಂದೆ ವಾಸುದೇವಾಚಾರ್ಯ ಜಾಗೀರದಾರ. ಶ್ರೀರಂಗರ ಶಿಕ್ಷಣ ಅಗರಖೇಡ, ಬಿಜಾಪುರಗಳಲ್ಲಿ ಜರುಗಿತು. ಅನಂತರ ಪುಣೆಯ ಡೆಕ್ಕನ್ ಕಾಲೇಜಿನಿಂದ ೧೯೨೫ ರಲ್ಲಿ ಬಿ.ಎ. ಪದವಿ ಪಡೆದರು. ಇವರಿಗೆ ಸಂಸ್ಕೃತದಲ್ಲಿ ವಿಶೇಷವಾದ ಒಲವಿದ್ದತು. ಅನಂತರ ಐ.ಸಿ.ಎಸ್. ಪರೀಕ್ಷೆಗೆ ಇಂಗ್ಲೇಂಡ್‌ಗೆ ತೆರಳಿ ಅಲ್ಲಿ ಭಾಷಾಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದುಕೊಂಡು ೧೯೨೮ರಲ್ಲಿ ಭಾರತಕ್ಕೆ ಬಂದರು. ಕೆಲವು ಕಾಲ ನಿರುದ್ಯೋಗಿಯಾಗಿದ್ದು ತದನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೩೦ ರಿಂದ ೧೯೪೮ ರವರೆಗೆ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬೆಂಗಳೂರು ಆಕಾಶವಾಣಿ ನಾಟಕ ವಿಭಾಗದ ಅಧ್ಯಕ್ಷರಾಗಿದ್ದರು. ೧೯೭೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮೆಯ ಸದಸ್ಯರಾದರು. ೧೯೭೧ ರಿಂದ ೧೯೭೪ ರವರೆಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕನ್ನಡ ರಂಗಭೂಮಿಗೆ ವೈವಿಧ್ಯಗಳನ್ನು ತಂದುಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಕನ್ನಡ, ಇಂಗ್ಲಿಷ್, ಸಂಸ್ಕೃತ, ಮರಾಠಿ ಭಾಷೆಗಳಲ್ಲಿ ಪರಿಣಿತರು. (ಇವರು ೧೯೮೪ ಅಕ್ಟೋಬರ್ ೧೭ ರಂದು ನಿಧನರಾದರು)

ಕೃತಿಗಳು
ರಂಗ ನಾಟಕಶಾಸ್ತ್ರ, ಭರತನಾಟ್ಯ, ಹರಿಜನ್ವಾರ, ಉದರ ವೈರಾಗ್ಯ, ಸಂಧ್ಯಾಕಾಲ, ಪ್ರಪಂಚ ಪಾಣಿಪತ್ತು, ಜರಾಸಂಧಿ, ದರಿದ್ರ ನಾರಾಯಣ, ಶ್ರೀರಂಗ ನಾಟ್ಯ ತರಂಗ, ರಂಗಭಾರತ, ಶೋಕಚಕ್ರ, ಕತ್ತಲೆ ಬೆಳಕು, ಹಾಳು ದೇಗುಲ, ಪ್ರಾರಬ್ದ, ಶಾರದೆಯ ಸಂಸಾರ, ನಗೆ, ಗೀತ ಆಹ್ವಾನ, ಕಾಲಿದಾಸ, ರಂಗಭಾರತ, ಸಾಹಿತಿಯ ಆತ್ಮ ಜಿಜ್ಞಾಸೆ, ಕೇಳು ಜನಮೇಜಯ, ಶತಾಯಗತಾಯ, ಸ್ವರ್ಗಕ್ಕೆ ಮೂರೇ ಬಾಗಿಲು, ನರಕದಲ್ಲಿ ನರಸಿಂಹ, ದಿ ಇಂಡಿಯನ್ ಥಿಯೇಟರ್, ಕಾಳಿದಾಸ ಮುಂತಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು.
೧೯೫೬ ರಲ್ಲಿ ರಾಯಚುರಿನಲ್ಲಿ ಜರುಗಿದ ೩೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.
೧೯೬೮ ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಫೆಲೋಷಿಪ್ ಗೌರವ
೧೯೭೧ರಲ್ಲಿ ಕಾಳಿದಾಸ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೭೨ರಲ್ಲಿ ಭಾರತ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ
೧೯೭೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗೌರವ.

ಯು.ಆರ್. ಅನಂತಮೂರ್ತಿ.
ಯು.ಆರ್. ಅನಂತಮೂರ್ತಿಯವರು ೧೯೩೨ ರ ಡಿಸೆಂಬರ್ ೨೧ರಂದು ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ. ತಂದೆ ಯು.ಪಿ.ರಾಜಗೋಪಾಲಾಚಾರ್ಯ, ತಾಯಿ ಸತ್ಯಭಾಮ. ಇವರ ಪ್ರಾಥಮಿಕ ವಿದ್ಯಾಭ್ಯಾಸ ಮೇಳಿಗೆ, ಮೇಗರವಳ್ಳಿ, ಕೊಣಂದೂರು, ತೀರ್ಥಹಳ್ಳಿಗಳಲ್ಲಿ ನಡೆಯಿತು. ಲೋಯರ್ ಸೆಕೆಂಡರಿ ಮತ್ತು ಎಸ್.ಎಸ್.ಎಲ್ಲ.ಸಿ. ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.
ಅನಂತರ ಶಿವಮೊಗ್ಗದ ಸರ್ಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಓದಿದರು. ಅನಂತರ ಮೈಸೂರು ಮಹಾರಾಜ ಕಾಲೇಜಿಗೆ ಸೇರಿ ಬಿ.ಎ. ಅನ್ಸರ್ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪಡೆದರು. ಮೈಸುರಿನಲ್ಲಿ ಇಂಗ್ಲಿಷ್ ಎಂ.ಎ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು. ಶಿವಮೊಗ್ಗದಲ್ಲಿ ಇಂಗ್ಲಿಷ್ ಉಪನ್ಯಾಸಕರಾದರು. ಹಾಸನದ ಸರ್ಕಾರಿ ಕಾಲೇಜಿನಲಲಿ ಅಧ್ಯಾಪಕರಾಗಿ, ಅನಂತರ ಮೈಸೂರಿನ ಮಹಾರಾಜ ಕಾಲೇಜಿಗೆ ಅಧ್ಯಾಪಕರಾಗಿ ೧೯೫೭ ರಲ್ಲಿ ಬಂದರು. ಅನಂತರ ೧೯೬೩ರಲ್ಲಿ ಕಾಮನ್‌ವೆಲ್ತ್ ಫೆಲೊಷಿಪ್ ಪಡೆದು ಇಂಗ್ಲೆಂಡಿನ ಬರ್ಮಿಂಗ್‌ಹೆಮ್ ವಿಶ್ವವಿದ್ಯಾಲಯದಿಂದ ಪಿ.ಎನ್.ಡಿ. ಪದವಿ ಪಡೆದರು. ೧೯೬೭ ರಿಂದ ೧೯೭೦ ರವರೆಗೆ ಮೈಸೂರಿನ ರೀಜನಲ್ ಕಾಲೇಜು ಆಫ್ ಎಜುಕೇಷನ್‌ನಲ್ಲಿ ರೀಡರ್ ಆಗಿ ಕೆಲಸ ಮಾಡಿದರು. ೧೯೭೦ ರಿಂದ ೧೯೮೦ ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದಲ್ಲಿ ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಮೇರಿಕಾದ ಅಯೋವ ವಿಶ್ವವಿದ್ಯಾನಿಲಯ, ಕೊಲ್ಲಾಪುರ, ಶಿವಾಜಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೯೮೭ ರಿಂದ ೯೧ ರವರೆಗೆ ಕೇರಳದ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾದರು.
ಯು.ಆರ್.ಅನಂತಮೂರ್ತಿಯವರು ಹಲವಾರು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ೧೯೯೨ ೯೩ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿದ್ದರು. ೧೯೯೩ ರಲ್ಲಿ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ೧೯೯೩ ೯೮ ರವರೆಗೆ ವಿ.ಕೃಗೋಕಾಕರ ನಂತರ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.

ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೮೩ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೪ ರಲ್ಲಿ ಕರ್ನಾಟಕ ಸರ್ಕಾರದ ಪ್ರಶಸ್ತಿ
೧೯೯೪ ರಲ್ಲಿ ಮಾಸ್ತಿ ಪ್ರಶಸ್ತಿ
೧೯೯೫ ರಲ್ಲಿ ಹಿಮಾಚಲ ಪ್ರದೇಶ ಸರ್ಕಾರದ ಶಿಖರ ಸಮ್ಮಾನ್ ಪ್ರಶಸ್ತಿ
೧೯೯೪ ರಲ್ಲಿ ಜ್ಞಾನಪೀಠ ಪ್ರಶಸ್ತಿ
೧೯೯೫ ರಲ್ಲಿ ಕೊಲ್ಕತ್ತಾದ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪ್ರಶಸ್ತಿ
೧೯೯೮ ಪದ್ಮಭೂಷಣ ಪ್ರಶಸ್ತಿ
೨೦೦೨ ರಲ್ಲಿ ತುಮಕೂರಿನಲ್ಲಿ ಜರುಗಿದ ೬೯ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿದ್ದರು.
 

ಪಾ.ವೆಂ.ಆಚಾರ್ಯ
ಪಾ.ವೆಂ ಆಚಾರ್ಯ ಅವರು ೧೯೧೫ ಫೆಬ್ರವರಿ ೬ ರಂದು ಉಡುಪಿಯಲ್ಲಿ ಜನಿಸಿದರು. ಪಾಡಿಗಾರು ವೆಂಕಟರಮಣ ಅಚಾರ್ಯ ಇವರ ಪೂರ್ಣ ಹೆಸರು. ಇವರೊಬ್ಬ ಕನ್ನಡದ ಪ್ರಸಿದ್ಧ ಪತ್ರಿಕೋದ್ಯಮಿ, ಸಾಹಿತಿ. ಇವರು ಓದಿದ್ದು ಆಗಿನ ಮೆಟ್ರಿಕ್‌ವರೆಗೆ ಮಾತ್ರ ಪತ್ರಿಕೋದ್ಯಮ ಇವರನ್ನು ಸಣ್ಣ ವಯಸ್ಸಿನಲ್ಲಿಯೇ ಆಕರ್ಷಿಸಿತು. ಆರಂಭದಲ್ಲಿ ಇವರು ಉಡುಪಿಯಲ್ಲಿದ್ದ ಅಂತರಂಗ ಹಾಗೂ ಧಾರವಾಡದ ಜಯ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡಿದರು.
ಪಾ.ವೆಂ.ಅಚಾರ್ಯರು ೧೯೪೨ ರಲ್ಲಿ ಹುಬ್ಬಳ್ಳಿಗೆ ಬಂದು ಆಗಿನ ಪ್ರಸಿದ್ಧ ಲೋಕ ಶಿಕ್ಷಣ ಟ್ರಸ್ಟನ ಕರ್ಮವೀರ ಸಾಪ್ತಾಹಿಕದಲ್ಲಿ ಸಹ ಸಂಪಾದಕರಾಗಿ ವೃತ್ತಿಜೀವನ ಆರಂಭಿಸಿದರು. ಇವರು ಲಾಂಗೂಲಾಚಾರ್ಯ ಎಂಬ ಹೆಸರಿನಿಂದ ವಾರ ವಾರವೂ ಅಂಕಣ ಬರೆಯುತ್ತಿದ್ದು ಕೊನೆಯಲ್ಲಿ ಈ ಕಾವ್ಯನಾಮವೇ ಪ್ರಸಿದ್ಧವಾಯಿತು. ಲೋಕಶಿಕ್ಷಣ ಟ್ರಸ್ಟಿನಲ್ಲಿ ೧೬೯೫ ರಲ್ಲಿ ಕಸ್ತೂರಿ ಮಾಸಪತ್ರಿಕೆ ಆರಂಭಿಸಿದಾಗ ಇವರು ಅದರ ಸಂಪಾದಕರಾದರು. ೧೯೭೨ರಲ್ಲಿ ನಿವೃತ್ತರಾದರು.
ಇವರು ಮೂಲತಃ ಹರಟೆಗಾರರೆಂದು ಪ್ರಸಿದ್ಧರು. ಕನ್ನಡದಲ್ಲಿ ಇವರಷ್ಟು ಹರಟೆಗಳನ್ನು ಬರೆದವರು ವಿರಳ. ವಿಡಂಬಣೆಯ ಮೊನಚುಳ್ಳ ಇವರ ಹರಟೆಗಳು ಕನ್ನಡ ಸಾಹಿತ್ಯಲೋಕಕ್ಕೆ ವಿಶಿಷ್ಟ ಕೊಡುಗೆಯೆನಿಸಿವೆ. ( ಆಚಾರ್ಯರು ೧೯೯೨ ಏಪ್ರಿಲ್ ೮ ರಂದು ಹುಬ್ಬಳ್ಳಿಯಲ್ಲಿ ನಿಧನರಾದರು.)

ಕೃತಿಗಳು
ಸ್ವತಂತ್ರ ಭಾರತ, ನವನೀರವ, ಪ್ರಹಾರ, ಬ್ರಾಹ್ಮಣರೇನು ಮಾಡಬೇಕು, ಆಯ್ದ ಲಲಿತ ಪ್ರಬಂಧಗಳು, ಇವರೇ ಲಾಂಗೂಲಾಚಾರ್ಯರು, ಚಿತ್ರ ವಿಚಿತ್ರ ಈ ಜಗತ್ತು, ಹಿಂದೂ ಮುಸ್ಲಿಮ್ ಹಾಗೂ ಇತರ ಕಥೆಗಳು ಮುಂತಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು
ಬಿ.ಡಿ. ಗೋಯೆಂಕಾ ಪ್ರಶಸ್ತಿ
೧೯೮೧ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ನವನೀರವ ಕೃತಿಗೆ ಮುಂಬಯಿ ಸರ್ಕಾರದ ಬಹುಮಾನ ಲಭಿಸಿದ.
 

ಆ.ನೇ. ಉಪಾಧ್ಯೆ
ಆದಿನಾಥ ನೇಮಿನಾಥ ಉಪಾಧ್ಯೆರು ೧೯೦೬ರ ಫೆಬ್ರುವರಿ ೬ ರಂದು ಬೆಳಗಾವಿ ಜಿಲ್ಲೆಯ ಸದಲಗಿಯಲ್ಲಿ ಜನಿಸಿದರು. ಪ್ರಾರಂಭದ ವ್ಯಾಸಂಗವನ್ನು ಬೆಳಗಾವಿಯಲ್ಲಿ ಮುಗಿಸಿ ಸಂಸ್ಕೃತ, ಪ್ರಾಕೃತ ಮತ್ತು ಅರ್ಧಮಾಗದೀ ಭಾಷೆ ಮತ್ತು ಸಾಹಿತ್ಯವನ್ನು ವ್ಯಾಸಂಗ ವಿಷಯವನ್ನಾಗಿ ಆರಿಸಿಕೊಂಡು ಕೊಲ್ಲಾಪುರದ ರಾಜಾರಾಮ ಕಾಲೇಜು ಮತ್ತು ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜುಗಳಲ್ಲಿ ಅಭ್ಯಾಸ ಮಾಡಿ ೧೯೨೮ರಲ್ಲಿ ಬಿ.ಎ. ಪದವಿ ಪಡೆದರು. ಅನಂತರ ಪುಣೆಯ ಭಂಡಾರ್‌ಕರ್ ಸಂಸ್ಥೆಯಲ್ಲಿ ಕಲಿತು ಉನ್ನತ ಶ್ರೇಣಿಯಲ್ಲಿ ಎಂ.ಎ. ಪದವಿ ಪಡೆದರು. ೧೯೩೦ ರಲ್ಲಿ ಎಂ.ಎ. ಮುಗಿದ ನಂತರ ಕೊಲ್ಲಾಪುರದ ರಾಜರಾಮ್ ಕಾಲೇಜಿನಲ್ಲಿ ಅರ್ಧಮಾಗದೀ ಪ್ರಾಕೃತ ವಿಭಾಗದ ಅಧ್ಯಾಪಕರಾಗಿ ನೇಮಕಗೊಂಡು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಮುಂದೆ ಮೂರು ವರ್ಷಗಳ ನಂತರ ಪ್ರಾಧ್ಯಾಪಕರಾದರು. ಅದೇ ವಿಶ್ವವಿದ್ಯಾಲಯದ ಸ್ಟ್ರಿಂಜರ್ ಸಂಶೋಧನಾ ಶಿಷ್ಯ ವೃತ್ತಿಯನ್ನು ಪಡೆದರು. ರಾಜರಾಮ್ ಕಾಲೇಜಿನಲ್ಲಿ ೩೩ ವರ್ಷಗಳ ಸೇವೆಯ ನಂತರ ನಿವೃತ್ತಿ ಹೊಂದಿ ಅದೇ ಕಾಲೇಜಿನಲ್ಲಿ ಯು.ಜಿ೯.ಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಇವರು ಮೈಸೂರು ವಿಶ್ವವಿದ್ಯಾಲಯ ಜೈನಶಾಸ್ತ್ರ ಮತ್ತು ಪ್ರಾಕೃತ ಮುಖ್ಯಸ್ಥರೂ ಆಗಿದ್ದರು. ಇವರು ೧೯೭೫ರ ಅಕ್ಟೋಬರ್ ೧೦ ರಂದು ನಿಧನರಾದರು.

ಕೃತಿಗಳು
ಪ್ರವಚನ ಸಾರ, ಪರಮಾತ್ಮ ಪ್ರಕಾಶ, ವರಾಂಗ ಚರಿತೆ, ಕಂಸವಹೊ, ಬೃಹತ್ ಕಥಾಕೋಶ, ತಿಲೋಯಪಣ್ಣತ್ತಿ, ಪಂಚಸ್ತುತ ಆತ್ಮಾನುಶಾಸನಂ, ದೇಶಕೋಶಗಳಲ್ಲಿನ ಕನ್ನಡ ಪದಗಳು, ಕವಿ ಪರಮೇಶ್ವರ ಅಥವ ಕವಿ ಪರಮೇಷ್ಠಿ ಮೊದಲಾದವು.

ಗೌರವ ಪ್ರಶಸ್ತಿ ಪುರಸ್ಕಾರಗಳು.
೧೯೩೯ ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಪದವಿ.
೧೯೪೦ ರಲ್ಲಿ ಹೈದರಾಬಾದಿನಲ್ಲಿ ಜರುಗಿದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ
೧೯೭೪ ರಲ್ಲಿ ಬೆಲ್ಜಿಯಂನಲ್ಲಿ ಜರುಗಿದ ಎರಡನೆಯ ಜಾಗತಿಕ ಧರ್ಮ ಮತ್ತು ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
೧೯೭೫ ರಲ್ಲಿ ಭಾರತ ಸರ್ಕಾರ ಸಂಸ್ಕೃತ ವಿದ್ವಾಂಸ ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಿತು.

ಜಿ.ಎಸ್. ಆಮೂರ
ಗುರುರಾಜ ಶಾಮಚಾರ್ಯ ಆಮೂರ ಇವರ ಪೂರ್ಣ ಹೆಸರು. ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಹೂರಣಗಿಯಲ್ಲಿ. ೧೯೨೫ ಮೇ ೮ ರಂದು ಜನಿಸಿದರು. ತಂದೆ ಶಾಮಾಚಾರ್ಯ, ತಾಯಿ ಗಂಗಾದೇವಿ. ಮುಂಬಯಿ ವಿಶ್ವವಿದ್ಯಾಲಯದಿಂದ ೧೯೪೭ ರಲ್ಲಿ ಬಿ.ಎ. ಪದವಿ, ೧೯೪೯ ರಲ್ಲಿ ಎಂ.ಎ. ಪದವಿಗಳನ್ನು ಗಳಿಸಿದರು. ಇವರು ದಿ ಕಾನ್ಸೆಪ್ಟ್ ಆಫ್ ಕಾಮಿಡಿ ಎಂಬ ವಿಷಯವನ್ನು ಕುರಿತು ಪ್ರಬಂಧವನ್ನು ಮಂಡಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೬೧ ರಲ್ಲಿ ಪಿ.ಎಚ್.ಡಿ. ಪದವಿಯನ್ನು ಗಳಸಿದರು. ೧೯೭೨ರಲ್ಲಿ ಇವರು ಸೀನಿಯರ್ ಫುಲ್‌ಬ್ರೈಟ್ ಸ್ಕಾಲರ್‌ಷಿಪ್ ಪಡೆದು ಅಮೇರಿಕೆಯ ವೇಲ್ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಗಳಲ್ಲಿ ಟಿ.ಎಸ್. ಎಲಿಯಟ್ ಕವಿಯ ಕುರಿತು ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನು ನಡೆಸಿದರು. ೧೯೭೩ ರಲ್ಲಿ ಇವರು ಬ್ರಿಟಿಷ್ ಕೌನ್ಸಿಲ್ಲಿನ ಆಮಂತ್ರಣದ ಮೇರೆಗೆ ಇಂಗ್ಲೆಂಡಿಗೆ ಭೇಟಿ ನೀಡಿದರು. ಪ್ರಾರಂಭದಲ್ಲಿ ಇವರು ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿ, ಅನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್ ಇನ್ ಇಂಗ್ಲಿಷ್ ಆಗಿ ಸೇವೆ ಸಲ್ಲಿಸಿದರು.

ಕೃತಿಗಳು
ಮಹಾಕವಿ ಮಿಲ್ಟನ್, ಕೃತಿ ಪರೀಕ್ಷೆ, ಕನ್ನಡ ಕಾದಂಬರಿ ಬೆಳವಣಿಗೆ, ಆಧುನಿಕ ಕನ್ನಡ ಸಾಹಿತ್ಯ, ವಿರಾಟ್ ಪುರುಷ, ಕಾದಂಬರಿಯ ಸ್ವರೂಪ, ಹೊಸ ಚಿಂತನೆ, ಅಮೃತವಾಹಿನಿ, ಸಿಮೋಲ್ಲಂಘನ, ಬೇಂದ್ರೆ ಕಾವ್ಯದ ಪ್ರತಿಮಾಲೋಕ, ಕನ್ನಡ ಸಣ್ಣಕತೆ, ದತ್ತಾತ್ರೇಯ ರಾಮಚಂದ್ರ ಬೇಂದ್ರ, ಕನ್ನಡ ಕಥನ ಸಾಹಿತ್ಯ ಕಾದಂಬರಿ, ಕಾಮಿಡಿ ಭುವನದ ಭಾಗ್ಯ ಮುಂತಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು
ಭಾರತೀಯ ಭಾಷಾ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿ,
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಲಭಿಸಿವೆ.

ಅನುಪಮಾ ನಿರಂಜನ
ಅನುಮಪ ನಿರಂಜನರು ೧೯೩೪ ಮೇ ೧೭ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಡಿ.ಶಿವರಾಮಯ್ಯ, ತಾಯಿ ಲಕ್ಷ್ಮೀದೇವಮ್ಮ. ವೆಂಕಟಲಕ್ಷ್ಮಿ ಇವರ ನಿಜ ನಾಮಧೇಯ. ಇವರ ಪತಿ ಸಾಹಿತಿ ನಿರಂಜನ. ನಿರಂಜನ ಅವರು ಇಟ್ಟ ಹೆಸರೇ ಅನುಪಮಾ. ಅನುಪಮಾ ನಿರಂಜನ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರು. ಇವರ ತಂದೆ ವಿದ್ಯಾ ಇಲಾಖೆಯಲ್ಲಿ ನೌಕರಿಯಲ್ಲಿದುದ್ದರಿಂದ ಇವರ ವಿದ್ಯಾಭ್ಯಾಸ ಬೇರೆ ಬೇರೆ ಕಡೆಗಳಲ್ಲಿ ಜರುಗಿತು.
ಅನಂತರ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿ ಇಂಟರ್‌ಮಿಡಿಯಟ್‌ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದರು. ತದನಂತರ ಮೈಸೂರು ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜು ಸೇರಿ ವೈದ್ಯಕೀಯ ಪದವಿ ಪಡೆದರು. ಆ ಸಂದರ್ಭದಲ್ಲಿ ನಿರಂಜನ ಅವರೊಂದಿಗೆ ಅಂತರ್ಜಾತಿಯ ವಿವಾಹವಾದರು. ಇವರು ಮೊದಲ ವೃತ್ತಿ ಆರಂಭಿಸಿದ್ದು ಧಾರವಾಡದಲ್ಲಿ ತದನಂತರ ಬೆಂಗಳೂರಿಗೆ ಸ್ಥಳಾಂತರಿಸಿದರು. ಇವರ ವಿದ್ಯಾರ್ಥಿ ದೆಸೆಯಲ್ಲಿಯೆ ಸಾಹಿತ್ಯ ರಚನೆ ಆರಂಭವಾಯಿತು. ಇವರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಒಂಬತ್ತು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಕನ್ನಡದ ವೈದ್ಯ ಸಾಹಿತ್ಯವನ್ನು ಕಟ್ಟಿ ಬೆಳೆಸಿದವರಲ್ಲಿ ಇವರು ಪ್ರಮುಖರು. ಇವರ ಹಲವಾರು ಕೃತಿಗಳು ಬೇರೆ ಬೇರೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಇವರು ಪ್ರವಾಸ ಸಾಹಿತ್ಯವನ್ನು ಕುಡಾ ರಚಿಸಿದ್ದಾರೆ. ೧೯೭೫ ರಲ್ಲಿ ಬರ್ಲಿನ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ಕಾಂಗ್ರಸ್‌ಗೆ ಬೆಂಗಲೂರಿನ ಪ್ರತಿನಿಧಿಯಾಗಿ ಪೂರ್ವ ಜರ್ಮನಿ, ರಷ್ಯಾ, ಪೋಲೆಂಡ್‌ಗಳಲ್ಲಿ ಪ್ರವಾಸ ಮಾಡಿ ಬಂದರು (ಇವರು ೧೯೯೧ ಫೆಬ್ರವರಿ ೧೪ ರಂದು ನಿಧನರಾದರು.)

ಕೃತಿಗಳು
ಅನಂತಗೀತ, ಸಂಕೋಲೆಯೊಳಗಿಂದ, ನೂಲುನೇಯ್ದ ಚಂದ್ರ, ಹಿಮದ ಹೂ,ಕಣ್ಮಣಿ, ನೀರಿಗೆ ನೈದಿಲೆ ಶೃಂಗಾರ, ರೂವಾರಿಯ ಲಕ್ಷ್ಮಿ, ಏಳುಸುತ್ತಿನ ಕೋಟೆ, ಹೃದಯ ಸಮುದ್ರ ಗಿರಿಧಾಮ,  ಕೇಳು ಕಿಶೋರ, ದಿನಕ್ಕೊಂದು ಕಥೆ ೧೨ ಸಂಪುಟಗಳು ಮುಂತಾದವುಗಳು.

ಗೌರವ, ಪ್ರಶಸ್ತಿ ಪುರಸ್ಕಾರಗಳು.
೧೯೭೭ ರಲ್ಲಿ ಕಾಸರಗೋಡು ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೭೮ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ
೧೯೭೮ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೧ ರಲ್ಲಿ ಬೆಂಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ
೧೯೮೩ ರಲ್ಲಿ ಕನ್ನಡ ರಾಜ್ಯೋತ್ಸವದ ಬೆಳ್ಳಿ ಹಬ್ಬದ ಪ್ರಶಸ್ತಿ
೧೯೮೭ ನಂಜನಗೂಡು ತಿರುಮಲಾಂಬ ಪ್ರಶಸ್ತಿ
೧೯೬೦ ರಲ್ಲಿ ರೂಪಾಯಿ ಲಕ್ಷ್ಮಿ ೧೯೭೧ರಲ್ಲಿ ಆರೋಗ್ಯ ದರ್ಶ ಕೃತಿಗೆ ರಾಜ್ಯ ಸರ್ಕಾರದ ಬಹುಮಾನ ಲಭಿಸಿದೆ.
ಇವರಿಗೆ ಅನುಪಮಾ ಅಭಿನಂದನಾ ಎಂಬ ಅಭಿನಂದನಾ ಗ್ರಂಥವನ್ನು ಅಭಿಮಾನಿಗಳು ಅರ್ಪಿಸಿದ್ದಾರೆ.

ಆಶ್ವಿನಿ
ಆಶ್ವನಿ ಮೂಲತಃ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಾದಮಂಗಲಂ ಗ್ರಾಮದವರು. ಇವರ ತಂದೆ ವೆಂಕಟರಾಘವಾಚಾರ್ಯರು. ಮಾಧ್ಯಮಿಕ ಶಾಲಾ ಉಪಾಧ್ಯಾಯರಾಗಿದ್ದರು. ತಾಯಿ ಲಕ್ಷ್ಮಮ್ಮ ಆಶ್ವಿನಿಯವರ ಮೂಲ ಹೆಸರು ಕನಕಮ್ಮ. ಪ್ರೌಢಶಾಲೆಯ ವ್ಯಾಸಂಗವನ್ನು ತುಮಕೂರಿನಲ್ಲಿ ಮುಗಿಸಿದರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಮೈಸೂರಿನಲ್ಲಿ ಪಡೆದರು. ಇಂಟರ್‌ಮಿಡಿಯೇಟ್ ಮುಗಿನ ನಂತರ ಅಕೌಂಟೆಂಟ್ ಜನರಲ್ ಕಛೇರಿಯಲ್ಲಿ ಉದ್ಯೋಗವನ್ನು ಹೊಂದಿದರು. ತದನಂತರ ಇದರ ಅನುಭವದಿಂದಾಗಿ ವಿಶ್ವವಿದ್ಯಾಲಯದ ಆಡಳಿತ ಕಛೇರಿಯಲ್ಲಿ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. ಕೃಷಿ ವಿಶ್ವವಿದ್ಯಾಲಯದಲ್ಲಿ ೨೬ ವರ್ಷಗಳಷ್ಟು ದೀರ್ಘಕಾಲ ಸೇವೆ ಸಲ್ಲಿಸಿದರು.
ಆಶ್ವಿನಿಯವರ ಕಾದಂಬರಿಗಳಲ್ಲಿ ಬೇಸುಗೆ, ಕಪ್ಪುಕೊಳ, ನಿಲುಕದ ನಕ್ಷತ್ರ, ಮನಮಿಡಿಯಿತು, ಕಾಮನ ಬಿಲ್ಲು ಇವು ಜನಪ್ರಿಯ ಚಲನಚಿತ್ರಗಳಾಗಿ ತೆರೆಕಂಡಿವೆ.
ಆಶ್ಚಿನಿಯವರು ಮೂಲತಃ ದಿಟ್ಟ ಸ್ವಭಾವದ ವ್ಯಕ್ತಿ, ಗಂಭೀರ ಸ್ವಭಾವದವರು. ಇವರ ಕಾದಂಬರಿಯ ನಾಯಕಿಯರಲ್ಲೂ ಇದನ್ನು ಕಾಣಬಹುದು. ಆಶ್ವಿನಿಯವರ ಬಹುತೇಕ ಕಾಂದಬರಿಗಳು ನಾಯಕಿ ಪ್ರಧಾನವಾದವುಗಳು ಆಶ್ವಿನಿಯವರಿಗೆ ತೆಲುಗು ಭಾಷೆಯಲ್ಲೂ ಒಳ್ಳೆಯ ಪಾಂಡಿತ್ಯವಿತ್ತು. ತೆಲುಗಿನಿಂದ ಎರಡು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರಿಗೆ ಚಿಕ್ಕಂದಿನಿಂದಲೂ ಓದುವ ಅಭಿರುಚಿ ಇತ್ತು.
 

ಎಂ.ಕೆ. ಇಂದಿರಾ
ಎಂ.ಕೆ. ಇಂದಿರಾ ಅವರು ೧೯೧೭ ಜನವರಿ ೫ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಸೂರ್ಯನಾರಾಯಣರಾವ್, ತಾಯಿ ಬನಶಂಕರಮ್ಮ. ಇವರ ಶಿಕ್ಷಣ ಮಾಧ್ಯಮಿಕ ಶಾಲೆಯ ಎರಡನೆಯ ತರಗತಿಯವರೆಗೆ ಮಾತ್ರ. ಟಿ.ಎಸ್. ರಾಮಚಂದ್ರರಾವ್ ಇವರ ಸೋದರ ಪ್ರಜಾವಾಣಿಯ ಸಂಪಾದಕರಾಗಿದ್ದರು. ಇವರ ಹನ್ನೆರಡನೆಯ ವಯಸ್ಸಿನಲ್ಲಿ ಮಂಡಗದ್ದೆ ಕೃಷ್ಣರಾಯರೊಡನೆ ವಿವಾಹವಾಯಿತು. ಪತಿ ೧೯೬೯ರಲ್ಲಿ ಅಸ್ತಮಾ ಕಾಯಿಲೆಯಿಂದ ನಿಧನರಾದರು. ಇವರಿಗೆ ಎಂಟು ಮಂದಿ ಮಕ್ಕಳು ಅದರಲ್ಲಿ ಉಳಿದವರು ನಾಲ್ವರು ಮಾತ್ರ. ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ತಮ್ಮ ನಲವತ್ತೈದನೆಯ ವಯಸ್ಸಿನ ಅನಂತರ ಕೃಷ್ಣರಾಯರ ಪ್ರೇರಣೆ ಇವರಿಗೆ ಬರೆಯಲು ಒತ್ತಾಸೆಯಾಯಿತು. ಕಾದಂಬರಿ, ಪ್ರವಾಸ ಕಥನ, ಕಥೆ, ಹರಟೆ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ಕೆಲವು ಕಾದಂಬರಿಗಳು ಭಾರತೀಯ ಕೆಲವು ಭಾಷೆಗಳಿಗೆ ಅನುವಾದಗೊಂಡಿವೆ ಗೆಜ್ಜೆಪೂಜೆ, ಸದಾನಂದ, ಫಣಿಯಮ್ಮ, ಹೂಬಾಣ, ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯಗೊಂಡಿವೆ. (ಇವರು ೧೯೯೪ ಮಾರ್ಚ್ ೧೫ ರಂದು ನಿಧನರಾದರು.

ಕೃತಿಗಳು
ತುಂಗಭದ್ರ ಹೆಣ್ಣಿನ ಆಕಾಂಕ್ಷೆ, ಕಲಾದರ್ಶಿ, ತಪೋವನದಲ್ಲಿ, ಬಿದಿಗೆ ಚಂದ್ರಮ ಡೊಂಕು, ನಾಗವೀಣಾ, ಚಿದ್ವಿಲಾಸ, ಯಾರು ಹಿತವರು, ಮುಸುಕು, ಡಾಕ್ಟರ್, ಜಾತಿ ಕೆಟ್ಟವಳು, ಕತೆಗಾರ, ಕೂಚುಭಟ್ಟ, ಮಧುವನ, ಜಾಲ, ಆಭರಣ, ನವಜೀವನ, ನಗಬೇಕು, ಅಂಬರದ ಅಪ್ಸರೆ, ದಶಾವತಾರ, ಸುಸ್ವಾಗತ, ಕವಲು, ಪೌರ್ಣಿಮೆ, ಕನ್ಯಾಕುಮಾರಿಯರಿಗೆ, ಕನ್ನಡ ಚಿತ್ರಶಿಲ್ಪಿ, ಚಿತ್ರಭಾರತ, ಪುಟ್ಟಣ್ಣ ಕಣಗಾಲ್, ಮುಂತಾದವು.

ಗೌರವ ಪ್ರಶಸ್ತಿ ಪುರಸ್ಕಾರಗಳು.
೧೯೬೫ ರಲ್ಲಿ ಸದಾನಂದ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ.
೧೯೭೦ ರಲ್ಲಿ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ
೧೯೭೬ ರಲ್ಲಿ ಫಣಿಯಮ್ಮ ಕೃತಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ
೧೯೮೦ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ.
೧೯೮೧ ರಲ್ಲಿ ದಾವಣಗೆರೆಯಲ್ಲಿ ಜರುಗಿದ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷೆ
೧೯೯೧ ರಲ್ಲಿ ಸುರಗಿ ಎಂಬ ಅಭಿನಂದನಾ ಗ್ರಂಥವನ್ನು ಅಭಿಮಾನಿಗಳು ಅರ್ಪಿಸಿದ್ದಾರೆ.

ಉಷಾ ನವರತ್ನರಾವ್
ಉಷಾ ನವರತ್ನರಾವ್ ಅವರು ೧೯೩೯ ನವೆಂಬರ್ ೨೩ ರಂದು ಮೈಸುರಿನಲ್ಲಿ ಜನಿಸಿದರು. ತಂದೆ ಎಂ. ವಿ. ಸುಬ್ಬರಾವ್, ತಾಯಿ ಶಾಂತಾಬಾಯಿ. ಇವುರ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಓದಿ ಬಿ.ಎ. ಪದವಿ ಪಡೆದುಕೊಂಡರು. ಫ್ರೆಂಚ್, ಜರ್ಮನಿ ಹಾಗೂ ಸಂಸ್ಕೃತದಲ್ಲಿ ಒಳ್ಳೆಯ ಪರಿಶ್ರಮವಿತ್ತು. ಪತ್ರಿಕೋದ್ಯಮ ಡಿಪ್ಲೋಮಾ, ಹರ್ಬಲ್ ಬ್ಯೂಟಿಕೇರ್‌ನಲ್ಲಿ ಸರ್ಟಿಫಿಕೇಟ್ ಕೋರ್ಸ್ ಹೊಂದಿದ್ದರು. ಇವರು ಓದುವ ಸಂದರ್ಭದಲ್ಲಿಯೇ ಬರೆಯುವ ಗೀಳಿಗೆ ಬಿದ್ದರು.
ಅನಂತರ ಇವರು ನವರತ್ನರಾಮ್ ಎಮಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇವರಿಗೆ ಕರ್ನಾಟಕ ಸಂಗೀತ ಹಾಗೂ ಭರತ ನಾಟ್ಯಗಳಲ್ಲಿ ಒಳ್ಳೆಯ ಪ್ರಾವಿಣ್ಯತೆ ಇತ್ತು. (ಇವರು ೨೦೦೦ ಅಕ್ಟೋಬರ್ ಒಂದರಂದು ನಿಧನರಾದರು)

ಕೃತಿಗಳು
ಆಲಾಪನಾ, ಆಸೆಗಳು ನೂರಾರು, ಅಂದೋಲನ, ಅಂಗೈಯಲ್ಲಿ ಅರಮನೆ, ಹೊಸ ಬಾಳಿಗೆ ನೀ ಜೊತೆಯಾದೆ, ಹೊಸರಾಗ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ, ಹೃದಯಮಿಲನ, ಇಲ್ಲೆ ಸ್ವರ್ಗ, ಕರೆದರೆ ಬರಬಾರದೇ, ಕೊನೆಯ ರಾತ್ರಿ ಮತ್ತು ಪ್ರತೀಕಾರ, ಮಕ್ಕಳಿರಲ್ಲವ್ವ ಮನೆತುಂಬ, ಮಾಮರಕೋಗಿಲೆ, ತವಸುಪ್ರಭಾತ, ವಧು ಬೇಕಾಗಿದೆ, ವಿಭಜನೆ, ವಾಡ್‌ನಂ.೫ ಯೌವ್ವನದ ಹೊನಲಲ್ಲಿ ಮುಂತಾದವು.

ಗೌರವ ಪ್ರಶಸ್ತಿ ಪುರಸ್ಕಾರಗಳು.
೧೯೭೫ರಲ್ಲಿ ಅತ್ಯುತ್ತಮ ಲೇಖಕಿ ಪ್ರಶಸ್ತಿ
೧೯೭೫ ರಲ್ಲಿ ಅತ್ಯುತ್ತಮ ಉಪಾಧ್ಯಾಯಿನಿ ಪ್ರಶಸ್ತಿ
೧೯೮೨ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮೊದಲಾದವು.

ವಿ.ಎಂ. ಇನಾಂದರ್
ವಿ.ಎಂ. ಇನಾಂದರ್ ಅವರು ೧೯೧೨ರ ಅಕ್ಟೋಬರ್ ೧ ರಂದು ಬೆಳಗಾವಿ ತಾಲ್ಲೂಕಿನ ಹುದಲಿಯಲ್ಲಿ ಜನಿಸಿದರು. ವೆಂಕಟೇಶ್ ಮಾಧ್ವರಾವ್ ಇನಾಂದರ್ ಇವರ ಪೂರ್ಣ ಹೆಸರು. ತಂದೆ ಮದ್ವರಾಯ, ತಾಯಿ ಕಮಲಾಬಾಯಿ. ಪ್ರಾಥಮಿಕ ಶಿಕ್ಷಣವನ್ನು ಇವರ ಗ್ರಾಮದಲ್ಲಿಯೇ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಬಿ.ಎ (ಅನರ್ಸ್) ಪದವಿ ಪಡೆದುಕೊಂಡರು. ಅನಂತರ ೧೯೪೧ರಲ್ಲಿ ಮುಂಬೈ ಎಲ್ಫಿನ್‌ಸ್ಟನ್ ಕಾಲೇಜಿನಿಂದ ಎಂ.ಎ. ಪದವಿ ಪಡೆದುಕೊಂಡರು. ಮುಂದೆ ಅದೇ ಕಾಲೇಜಿನಲ್ಲಿಯೇ ಇಂಗ್ಲಿಷ್ ಉಪ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಸಂಸ್ಕೃತ, ಇಂಗ್ಲಿಷ್, ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇವರು ಇಂಗ್ಲೆಂಡ್, ಕೆನಡಾ ಅಮೆರಿಕಾ ದೇಶಗಳನ್ನು ಪ್ರವಾಸ ಮಾಡಿದ್ದಾರೆ. (ಇವರು ೧೯೮೬ ರಲ್ಲಿ ನಿಧನರಾದರು)
ಕೃತಿಗಳು
ಸ್ವರ್ಗದ ಬಾಗಿಲು, ಯಾತ್ರಿಕರು, ಈಪರಿಯ ಸೊಬಗು, ಚಿತ್ರಲೇಖ ಯಾತ್ರಿಕರು, ನವಿಲು ನೌಖೆ, ಮುಕ್ತಿ, ಎರಡು ಧ್ರುವ, ಮುರಾಚಿಟ್ಟೆ, ಕನಸಿನ ಮನೆ, ವಿಜಯ ಯಾತ್ರೆ, ಶಾಪ, ಪಾಶ್ಚಾತ್ಯ ಕಾವ್ಯ ಮೀಮಾಂಸೆ, ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ, ಯಯಾತಿ ಇದು ಇವರ ಅನುವಾದಿತ ಕೃತಿ. ಬಿಡುಗಡೆ, ಅಂಬೇಡ್ಕರ್ ಜೀವನ ಚರಿತ್ರೆ, ಉತ್ತರ ರಾಮ ಚರಿತ್ರೆ, ಗೋವಿಮದ ಪೈ. ಶಿವರಾಮ ಕಾರಂತ ಮುಂತಾದವು.

ಗೌರವ ಪ್ರಶಸ್ತಿ ಪುರಸ್ಕಾರಗಳು
ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ,
ಯಯಾತಿ ಕಾದಂಬರಿಯ ಅನುವಾದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
ಮುಂಬಯಿ ವಿಶ್ವವಿದ್ಯಾಲಯ ಮಾಂಡಲಿಕ ಸುವರ್ಣ ಪದಕ, ಭಾರತೀಯ ವಿದ್ಯಾಭವನದ ಸುವರ್ಣ ಪದಕ ಲಭಿಸಿದೆ.

ಕೆ.ವಿ. ಅಯ್ಯರ್
ಕೆ.ವಿ.ಅಯ್ಯರ್ ಅವರು ಕೋಲಾರ ಜಿಲ್ಲೆಯ ದೇವರಾಯನ ಸಮುದ್ರದಲ್ಲಿ ಜನಿಸಿದರು. ಕೋಲಾರ ವೆಂಕಟೇಶ್ ಅಯ್ಯರ್ ಇವರ ಪೂರ್ಣ ಹೆಸರು. ತಂದೆ ರಾಮಸ್ವಾಮಯ್ಯ, ಬಡತನದಿಂದಾಗಿ ಮೆಟ್ರಿಕ್ಯುಲೇಷನ್‌ವರೆಗೆ ಓದಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಇವರಿಗೆ ಅಂಗ ಸಾಧನೆಯಲ್ಲಿ ವಿಶೇಷ ಅಭಿರುಚಿಯಿತ್ತು. ಇದರಿಂದ ಅದರ ಆಸಕ್ತಿವಹಿಸಿ ಸ್ವಂತ ವ್ಯಾಯಾಮ ಶಾಲೆಯನ್ನು ಇವರು ಬೆಂಗಳೂರಿನಲ್ಲಿ ತೆರೆದರು. ಇವರಿಗೆ ನಾಟಕದಲ್ಲಿ ವಿಶೇಷ ಅಭಿರುಚಿಯಿದ್ದ ಕಾರಣದಿಂದ ಟಿ.ಪಿ. ಕೈಲಾಸಂ ಪರಿಚಿತರಾದರು. ಟಿ.ಪಿ ಕೈಲಾಸಂ ಇವರಿಗೆ ಬರೆಯಲು ಪ್ರೇರೇಪಿಸಿದರು. ಜಿ.ಪಿ. ರಾಜರತ್ನಂ ಅವರು ಇವರಿಗೆ ಮಾರ್ಗದರ್ಶನ ನೀಡಿದರು. ನಾಟಕ ಕ್ಷೇತ್ರವು ಇವರಿಗೆ ಪ್ರಿಯವಾದುದ್ದರಿಂದ ರವಿ ಎಮಬ ನಾಟಕ ಸಂಘವೊಂದನ್ನು ಸ್ಥಾಪಿಸಿ ಅದರ ಸ್ಥಾಪಕ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇವರು ೧೯೮೦ರ ಜನವರಿ ೩ ರಂದು ನಿಧನ ಹೊಂದಿದರು.

ಕೃತಿಗಳು
ಶಾಂತಲಾ, ರೂಪದರ್ಶಿ, ಮಹಾಶಿಲ್ಪಿ, ಸಮುದ್ಯತಾ, ದಯ್ಯದ ಮನೆ, ಕೈಲಾಸಂ ಸ್ಮರಣೆ ಮುಂತಾದವು

ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೭೯ ರಲ್ಲಿ ಕರ್ನಾಟಕದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತು.

ಸು.ರಂ. ಎಕ್ಕುಂಡಿ.
ಸುಬ್ಬಣ್ಣ ರಂಗನಾಥ ಎಕ್ಕುಂಡಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರುನಲ್ಲಿ ೧೯೨೩ರ ಜನವರಿ ೨೦ ರಂದು ಜನಿಸಿದರು. ತಂದೆ ರಂಗಾಚಾರ್ಯ, ಶಿಕ್ಷಕರು, ತಾಯಿ ರಾಜಕ್ಕ. ಇವರ ಆರಂಭದ ಶಿಕ್ಷಣವು ಹುಬ್ಬಳ್ಳಿಯಲ್ಲಿ ನಡೆಯಿತು. ಸಾಂಗ್ಲಿಯ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಮತ್ತು ಹೈದರಾಬಾದಿನಲ್ಲಿ ಉನ್ನತ ಶಿಕ್ಷಣವನನು ಮುಗಿಸಿ ಸಿ.ಐ.ಈ ಪದವಿಯನ್ನು ಪಡೆದರು. ಮುಂದೆ ಬಂಕಿಕೊಡ್ಲಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು. ಇವರ ಗುರುಗಳು ಇವರಿಗೆ ಬಿ.ಎಂ.ಶ್ರೀ, ಟೆನಿಸನ್, ವರ್ಡ್ಸವರ್ತ್ ಮುಂತಾದವರ ಸಾಹಿತ್ಯವನ್ನು ಪರಿಚಯ ಮಾಡಿಸಿಕೊಟ್ಟರು. ಇವರು ತಮ್ಮ ಸಾಹಿತ್ಯವನ್ನು ಹದಿನೈದನೆಯ ವಯಸ್ಸಿನಲ್ಲಿಯೇ ಆರಂಭಿಸಿದರು. ಹುಬ್ಬಳ್ಳಿಯಲ್ಲಿ ಬೇಂದ್ರೆ, ಗೋಕಾಕ್, ಶಂ.ಬಾ.ಜೋಶಿ, ಶ್ರೀರಂಗ, ಆನಂದಕಂದ ಮೊದಲಾದ ಮಹೋದಯರ ಪರಿಚಯವಾಗಿ ಕಾವ್ಯದಲ್ಲಿ ಆಸಕ್ತಿ ಬೆಳೆಯಿತು. ಇವರು ಕೆಲವು ಕಾಲ ರೋಮನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಇವರು ೧೯೯೫ರ ಆಗಸ್ಟ್ ೨೦ ರಂದು ನಿಧನರಾದರು.

ಕೃತಿಗಳು.
ಪ್ರತಿಬಿಂಬಗಳು, ಹಾವಾಡಿಗರ ಹುಡುಗ, ಆನಂದ ತಿರ್ಥರು, ಮತ್ಸ್ಯಗಂಧಿ, ಸಂತಾನ, ಲೆನಿನ್ನರ ನೆನಪಿಗಾಗಿ, ಗೋದಿಯ ತೆನೆಗಳು, ಕಾವ್ಯ ವಿಮರ್ಶೆ, ನವ್ಯ ಕವಿತೆ, ಮಧ್ವಮುನಿ, ಬೆಳ್ಳಕ್ಕಿಗಳು, ನೆರಳು, ಪಂಜುಗಳು, ಪು.ತಿ.ನ. ಜೀವನ ಚರಿತ್ರೆ, ಬಕುಲದ ಹೂಗಳು ಮುಂತಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೭೦ ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ
೧೯೭೪ರಲ್ಲಿ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ
೧೯೮೨ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
೧೯೯೨ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
 

ಕನಕದಾಸರು.
ಕನಕದಾಸರು ಪುರಂದದಾಸರ ಸಮಕಾಲೀನರು. ಬೀರಪ್ಪ ಮತ್ತು ಬಚ್ಚಮ್ಮ ಕುರುಬ ದಂಪತಿಗಳ ಮಗನಾಗಿ ೧೫೦೯ ರಲ್ಲಿ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಕಾಗಿನೆಲೆಯಲ್ಲಿ ಆದಿಕೇಶವನ ಗುಡಿಯನ್ನು ಕಟ್ಟಿಸಿ ಆತನನ್ನು ಆರಾಧ್ಯ ದೈವನನ್ನಾಗಿ ಮಾಡಿಕೊಂಡು ಸಾಹಿತ್ಯ ರಚನೆ ಮಾಡಿದ ಕವಿ. ಕಾಗಿನೆಲೆಯಾದಿಕೇಶವ ಇವರ ಅಂಕಿತನಾಮವಾಗಿದೆ. ಉಡುಪಿಯ ಶ್ರೀಕೃಷ್ಣ ದರ್ಶನಕ್ಕೆ ಶೂದ್ರನಾದ ಇವರಿಗೆ ಅರ್ಚಕರು ಅವಕಾಶ ಕಲ್ಪಿಸಿಕೊಡದಿದ್ದಾಗ ಕೃಷ್ಣ ವಿಗ್ರಹವೇ ಈತನ ಕಡೆಗೆ ತಿರುಗಿ ದರ್ಶನ ಕೊಟ್ಟಿತಂತೆ, ಆಗ ಅಲ್ಲಿನ ಗೋಡೆಗೆ ಒಂದು ಕಿಂಡಿ ಬಿದ್ದು ಕನಕನ ಕಿಂಡಿಯೆಂದು ಪ್ರಸಿದ್ಧಿಯಾಗಿದೆ. ಇದು ಇವರ ಒಂದು ಪವಾಡವಾಗಿದೆ.
ಕನಕದಾಸರು ಹರಿಕೀರ್ತನೆಗಳನ್ನು ರಚಿಸಿದರು. ಇವುಗಳಲ್ಲದೆ ಷಟ್ಪದಿ ಸಾಂಗತ್ಯ ಕೃತಿಗಳನ್ನು ರಚಿಸಿದರು. ಮೋಹನ ತರಂಗಿಣಿ ಇದೊಮದು ಸಾಂಗತ್ಯ ಕೃತಿ. ೨೭೦೦ ಪದ್ಯಗಳನ್ನು ಒಳಗೊಂಡ ದೊಡ್ಡ ಕಾವ್ಯ. ಕಾಮದಹನ ಉಷಾ ಅನಿರುದ್ಧ ಪ್ರಣಯ ಶಂಬಕಾಸುರ ವಧೆ, ಬಾಣಾಸುರ ವಿಜಯದ ಕತೆ ಇದರಲ್ಲಿದೆ. ರಾಮಧಾನ್ಯ ಚರಿತ್ರೆ ಇದೊಂದು ಭಾಮಿನಿ ಷಟ್ಪದಿಯಲ್ಲಿರುವ ಖಂಡಕಾವ್ಯ. ಅಪರೂಪದ ಕೃತಿ. ಇಲ್ಲಿ ೧೬೫ ಪದ್ಯಗಳಿದ್ದು ರಾಗಿ ಮತ್ತು ಭತ್ತಗಳ ನಡುವೆ ವಾದ ವಿವಾದ ಮೂಡಿ ಅಲ್ಲಿ ರಾಗಿ ಗೆದ್ದಿತೆಂದು ಹೇಳುವ ಕೃತಿಯಾಗಿದೆ. ನಳಚರಿತ್ರೆ ಭಾಮಿನಿ ಷಟ್ಪದಿಯಲ್ಲಿರುವ ರಮ್ಯವಾದ ಕಥನ ಕಾವ್ಯ. ಇಲ್ಲಿ ೪೮೦ ಪದ್ಯಗಳಿವೆ. ಇದರಲ್ಲಿ ನಳದಮಯಂತಿಯರ ಕತೆ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಹರಿಭಕ್ತಸಾರವು ಭಾಮಿನಿ ಷಟ್ಪದಿಯ ೧೧೦ ಪದ್ಯಗಳನ್ನೊಳಗೊಂಡ ಭಕ್ತಿ ವೈರಾಗ್ಯಗಳನ್ನು ಕುರಿತು ತಿಳಿಸುವ ಕಾವ್ಯವಾಗಿದೆ. ಇವರ ಕೀರ್ತನೆಗಳಲ್ಲಿ ಭಕ್ತಿ ತೊರೆಯಾಗಿ ಹರಿದಿದೆ. ಏನು ಇಲ್ಲದ ಎರಡು ದಿನದ ಸಂಸಾರ. ಬೆಳ್ಳಿ ಬಂಗಾರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡು ಚಳ್ಳೆ ಪಿಳ್ಳೆ ಗೊಂಬೆಯಂತೆ ಆಡಿಹೋಯಿತು. ತನು ನಿನ್ನದು ಜೀವನ ನಿನ್ನದು, ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ, ಅಜ್ಞಾನಿಗಳ ಕೂಡಾ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡ ಜಗಳವೇ ಲೇಸು ಹೀಗೆ ಸಮಾಜದ ಕಟು ಟೀಕೆ ಪ್ರಪಂಚದ ಅನುಭವ. ಭಕ್ತಿಯ ಭೋರ್ಗರೆತ ಜನ ಮನವನ್ನು ತಿದ್ದಿ ಸಮಾಜ ಸುಧಾರಿಸುವ ಕೀರ್ತನೆಗಳನ್ನು ರಚಿಸಿದ್ದಲ್ಲದೆ ಇನ್ನು ಹಲವಾರು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅರ್ಪಿಸಿದ ಅಪಾರ ಕೀರ್ತಿ ಇವರದು.

ಡಿ.ಎಸ್. ಕರ್ಕಿ
ಡಿ.ಎಸ್.ಕರ್ಕಿ ಅವರು ೧೯೦೭ ರ ನವೆಂಬರ್ ೧೫ ರಂದು ಬೆಳಗಾವಿ ಜಿಲ್ಲೆಯ ಭಾಗೋಜಿ ಕೊಪ್ಪದಲ್ಲಿ ಜನಿಸಿದರು. ತಂದೆ ಸಿದ್ದಪ್ಪ ಕರ್ಕಿ, ತಾಯಿ ದುಂಡವ್ವ ದುಂಡಪ್ಪ ಸಿದ್ದಪ್ಪ ಕರ್ಕಿ ಇವರ ಪೂರ್ಣ ಹೆಸರು. ಇವರು ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದರಿಂದಾಗಿ ಇವರು ಸೋದರಮಾವನ ಮನೆಯಲ್ಲಿ ಬೆಳೆಯಬೇಕಾಯಿತು. ಬೆಲ್ಲದ ಬಾಗೇವಾಡಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಬೆಳಗಾವಿಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ಮಹಾರಾಷ್ಟ್ರದ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು. ಮಹಾರಾಷ್ಟ್ರದ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಪುಣೆಯ ಘರ್ಗುಸನ್ ಕಾಲೇಜಿನಲ್ಲಿ, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ ಪಡೆದರು. ಕಾರವಾರದ ಸರ್ಕಾರಿ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಜೀವನ ಆರಂಭಿಸಿದರು. ಹಲವು ಕಾಲ ಕೆ ಎಲ್ ಇ ಸೊಸೈಟಿಯಲ್ಲಿ ಸೇವೆ ಸಲ್ಲಿಸಿದರು. ಅನಂತರ ಜಿ.ವಿ.ಹೈಸ್ಕೂಲಿನಲ್ಲಿ ಅಧ್ಯಾಪಕರಾದರು. ಅನಂತರ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಕೆಎಲ್‌ಇ ಸೊಸೈಟಿಯ ಹುಬ್ಬಳ್ಳಿಯ ಕಾಡಸಿದ್ದೇಶ್ವರ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ಪ್ರಾಂಶುಪಾಲರಾಗಿ, ಸೇವೆ ಸಲ್ಲಿಸಿದರು. ಕನ್ನಡ ಛಂಧೋವಿಕಾಸ ಕೃತಿಗೆ ೧೯೪೯ರಲ್ಲಿ ಪಿ.ಎಚ್.ಡಿ. ಪದವಿ ನೀಡಿತು. ಇವರು ಜನವರಿ ೧೬ ೧೯೮೪ ರಲ್ಲಿ ನಿಧನರಾದರು.
ಕೃತಿಗಳು
ನಕ್ಷತ್ರಗಾನ, ಕನ್ನಡ ಛಂದೋವಿಕಾಸ, ಗೀತಗೌರವ, ಭಾವತೀರ್ಥ, ತನನ ತೋಂ, ಕರಿಕೆ ಕಣಗಿಲು, ನಮನ, ಸಾಹಿತ್ಯ ಸಂಸ್ಕೃತಿ ಶೃತಿ, ಮಕ್ಕಳ ಶಿಕ್ಷಣ, ಮೊದಲಾದವು. ಹಚ್ಚೇವು ಕನ್ನಡದ ದೀಪ ಇವರ ಒಂದು ಖ್ಯಾತಿವೆತ್ತ ಕವಿತೆ.
ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೪೯ ರಲ್ಲಿ ಕನ್ನಡ ಛಂದೋವಿಕಾಸ ಕೃತಿಗೆ ಪಿ.ಎಚ್.ಡಿ. ಪದವಿ
೧೯೭೨ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೯೧ ರಲ್ಲಿ ಕಾವ್ಯ ಗೌರವ ಎಂಬ ಅಭಿನಂದನಾ ಗ್ರಂಥವನ್ನು ಅಭಿಮಾನಿಗಳು ಅರ್ಪಿಸಿದ್ದಾರೆ.
 

ಕೆರೂರ ವಾಸುದೇವಾಚಾರ್ಯ
ಕೆರೂರ ವಾಸುದೇವಾಚಾರ್ಯರು ೧೮೬೬ ರ ಅಕ್ಟೋಬರ್ ೧೫ ರಂದು ಬಾಗಲಕೋಟೆ ಜಿಲ್ಲೆಯ ಕೆರೂರಿನಲ್ಲಿ ಜನಿಸಿದರು. ತಂದೆ ಶ್ರೀನಿವಾಸಚಾರ್ಯ ಕೆರೂರಿನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದರು. ಪ್ರೌಢ ಶಿಕ್ಷಣಕ್ಕಾಗಿ ಪೂನಾದ ಫರ್ಗೂಸನ್ ಕಾಲೇಜಿಗೆ ಸೇರಿದರು. ಕಾರಣಾಂತರಗಳಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ವಕೀಲಿ ಅಭ್ಯಾಸದ ಕಡೆಗೆ ಗಮನ ಸೆಳೆದು ೧೮೯೯ ರಲ್ಲಿ ವಕೀಲಿ ವೃತ್ತಿಯಲ್ಲಿ ತೇರ್ಗಡೆ ಹೊಂದಿದರು. ವಕೀಲಿ ಪದವಿ ಪಡೆದರೂ ಅವರ ಮನಸ್ಸು ಹೊರಳಿದ್ದು ಸಾಹಿತ್ಯ ಮತ್ತು ಪತ್ರಿಕೋದ್ಯಮದತ್ತ ಇವರು ಶುಬೋಧಯ ಮತ್ತು ಸಚಿತ್ರ ಭಾರತ ಎಂಬ ಪತ್ರಿಕೆಗಳ ಸಂಪಾದಕರಾಗಿದ್ದರು. ಹೊಸಗನ್ನಡದ ಪ್ರಾರಂಭದ ಗಮನಾರ್ಹ ಕಾದಂಬರಿಕಾರರಲ್ಲಿ ಕೆರೂರು ವಾಸುದೇವಾಚಾರ್ಯರು ಒಬ್ಬರು. ಕನ್ನಡದ ಪ್ರಥಮ ಸಾಮಾಜಿಕ ಕಾದಂಬರಿಯ ಇಂದಿರಾ ಕೃತಿಯ ಕರ್ತೃ ವಾಸುದೇವಾಚಾರ್ಯರು ಕಾದಂಬರಿಕಾರರಂತೆ ಕತೆಗಾರರಾಗಿಯೂ ಪ್ರಮುಖರು. ಹಲವಾರು ಕಥೆಗಳನ್ನು ರಚಿಸಿದ್ದಾರೆ. ಕೆರೂರರು ಸಾಹಿತ್ಯ ಕೃಷಿಯಲ್ಲಿ ನಾಟಕ ಸಾಹಿತ್ಯವೂ ಕೂಡ ಗಮನಾರ್ಹವಾದದ್ದು. ಕೆರೂರರು ಜೀವಿಸಿದ್ದು ಐವತ್ತೈದು ವರ್ಷ ಮಾತ್ರ. ಅವರ ಸಾಹಿತ್ಯ ಸೇವೆ, ಪತ್ರಿಕೋದ್ಯಮ ಕಾರ್ಯ ನಡೆದದ್ದು ಎರಡು ದಶಕಗಳ ಅವಧಿಯಲ್ಲಿ ಸಣ್ಣ ಕಥೆ, ಕಾದಂಬರಿ, ನಾಟಕಗಳನ್ನು ರಚಿಸಿ ಮಹತ್ವಪೂರ್ಣವಾದ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ನದೆ ಆದ ವಿಶಿಷ್ಟ ಕೊಡುಗೆ ನೀಡಿದ್ದಾರೆ. ವಾಸುದೇವ ವಿನೋದಿನಿ ನಾಟ್ಯ ಸಭೆಯವರು ೧೯೬೪ ರಲ್ಲಿ ಕೆರೂರರ ಜ್ಞಾಪಕಾರ್ಥವಾಗಿ ವಾಸುದೇವ ಪ್ರಶಸ್ತಿ ಎಂಬ ಸ್ಮರಣ ಗ್ರಂಥವನ್ನು ಪ್ರಕಟಿಸಿದ್ದಾರೆ. ಇವರು ಜನವರಿ ೨೧ ರಂದು ನಿಧನ ಹೊಂದಿದರು.

ಕೃತಿಗಳು
ಯದುಮಹಾರಾಜ, ಭ್ರಾತೃಘಾತಕನಾದ ಔರಂಗಜೇಬ, ವಾಲ್ಮೀಕಿ ವಿಜಯ, ಪ್ರೇಮ ವಿಜಯ, ತೊಳೆದ ಮುತ್ತು, ಬೆಳಗಿದ ದೀಪಗಳು, ಇಂದಿರೆ, ಮಲ್ಲೇಶಿಯ ನಲ್ಲೆಯರು, ಪ್ರಕೃತಿಬಲ, ಮನೆಮನೆಯ ಸಮಾಚಾರ, ನಳದಮಯಂತಿ, ವಸಂತಯಾಮಿನಿ, ಸ್ವಪ್ನ ಚಮತ್ಕಾರ, ಸುರತನಗರದ ಶ್ರೇಷ್ಠಿ, ಪತಿ ವಶೀಕರಣ ಮುಂತಾದವು.
 

ನಾ. ಕಸ್ತೂರಿ
ನಾ.ಕಸ್ತೂರಿಯವರು ೧೮೯೭ ರ ಡಿಸೆಂಬರ್ ೧೫ ರಂದು ಕೇರಳ ತ್ರಿಪುತ್ತೂರ್‌ನಲ್ಲಿ ಜನಿಸಿದರು. ಇವರ ಮಾತೃ ಭಾಷೆ ಮಲಯಾಳಂ. ಆದರೆ ಇವರು ಬರೆದದ್ದು ಕನ್ನಡದಲ್ಲಿ. ಇವರ ವಿದ್ಯಾಭ್ಯಾಸ ಕೇರಳದಲ್ಲಿ ಜರುಗಿತು. ತಿರುವನಂತಪುರದಲ್ಲಿ ಎಂ.ಎ. ಮತ್ತು ಬಿ.ಎಲ್. ಪದವಿಗಳನ್ನು ಪಡೆದುಕೊಂಡರು. ತದನಂತರ ಮೈಸುರಿಗೆ ಬಂದು ಬನುಮಯ್ಯನವರ ವಿದ್ಯಾಸಂಸ್ಥೆಯ ಪ್ರೌಢಶಾಲೆಯಲ್ಲಿ ಇತಿಹಾಸ ಅಧ್ಯಾಪಕಾರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ತದನಂತರ ಮೈಸುರು ವಿಶ್ವವಿದ್ಯಾಲಯದ ಇಂಟರ್‌ಮೀಡಿಯೆಟ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಇವರು ಉಪಪ್ರಾಧ್ಯಾಪಕರಾಗಿ, ಸೂಪರಿಂಡೆಂಟರಾಗಿ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ೧೯೫೫ ರಲ್ಲಿ ನಿವೃತ್ತಿ ಹೊಂದಿದರು. ಸನಾತನ ಸಾರಥಿ ಎಂಬ ಆಧ್ಯಾತ್ಮಿಕ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಹಾಸ್ಯ ಪ್ರಧಾನ ಬರವಣಿಗೆಗೆ ಹೆಸರಾಗಿದ್ದ ನಾ.ಕಸ್ತೂರಿ ಕನ್ನಡದ ಹೆಸರಾಂತ ಶ್ರೇಷ್ಠ ಬರಹಗಾರರು. ನಾ.ಕಸ್ತೂರಿಯವರು ಕೊರವಂಜಿ ಪತ್ರಿಕೆಗೆ ಇಪ್ಪತೈದು ವರ್ಷಗಳ ಕಾಲ ಲೇಖನಗಳನ್ನು ಬರೆದರು. ಉತ್ತಮ ಭಾಷಣಕಾರರಾಗಿದ್ದ ನಾ. ಕಸ್ತೂರಿಯವರು ತಮ್ಮ ಭಾಷಣಗಳುದ್ದಕ್ಕೂ ಹಾಸ್ಯ ಮಿಶ್ರಿತವಾಗಿ ಮಾತನಾಡಿ ಜನರನ್ನು ರಂಜಿಸುತ್ತಿದ್ದರು. ಇವರು ೧೯೮೭ ರ ಆಗಸ್ಟ್ ೧೪ ರಂದು ಪುಟ್ಟಪರ್ತಿಯಲ್ಲಿ ನಿಧನರಾದರು.

ಕೃತಿಗಳು.
ಚೆಂಗೊಲಿಚೆಲುವ, ಗಗ್ಗಯ್ಯನ ಗಡಿಬಿಡಿ, ಚಕ್ರದೃಷ್ಟಿ, ಗೃಹದಾರಣ್ಯಕ, ಶಂಖವಾದ್ಯ, ಗಾಳಿಗೋಪುರ, ಯದ್ವಾತದ್ವಾ, ಡೊಂಕುಬಾಲ, ಉಪಾಯವೇದಾಂತ, ಅಲ್ಲೋಲ ಕಲ್ಲೋಲ, ಅನರ್ಥಕೋಶ, ಪಾತಾಳದಲ್ಲಿ ಪಾಪಚ್ಚಿ, ದಿಲ್ಲೀಶ್ವರನ ದಿನಚರಿ, ಕಾಡಾನೆ, ವರಪರೀಕ್ಷೆ, ಕೆಂಪು ಮೀನು, ಎರಡು ಬಳ್ಳ, ಅಶೋಕ, ಮದುವೆ, ಲೇಮಿಸರ್ ಬಲ್ಸ್, ಮೊದಲಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು
೧೯೮೧ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರನ್ನು ಪುರಸ್ಕರಿಸಿತು.
 

ಕಮಲಾ ಹಂಸನಾ
ಕಮಲಾ ಹಂಪನಾ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ೧೯೩೫ ಅಕ್ಟೋಬರ್ ೨೮ ರಂದು ಜನಿಸಿದರು. ತಂದೆ ರಾಮಧಾಮ ನಾಯಕ್, ತಾಯಿ ರಂಗಲಕ್ಷ್ಮಮ್ಮ. ಕ್ಯಾತಸಂದ್ರ, ಯಳಂದೂರು, ಅಮೃತೂರು ಚಳ್ಳಕೆರೆ, ಭದ್ರಾವತಿ, ತುಮಕೂರು, ಹಾಗೂ ಮೈಸೂರಿನಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಸುಮಾರು ೩೫ ವರ್ಷ ಅಧ್ಯಾಪಕ ವೃತ್ತಿ ನಿರ್ವಹಿಸಿದ ಇವರು ೧೯೯೩ರಲ್ಲಿ ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯದ. ಜೈನಶಾಸ್ತ್ರ ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆಯಾಗಿ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಮೆರಿಕಾ, ಕೆನಾಡಾ ಮುಂತಾದ ವಿದೇಶಗಳಿಗೆ ಭೇಟಿ ನೀಡಿ ಅಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಕುವೆಂಪು, ತೀ.ನಂ. ಶ್ರೀಕಂಠಯ್ಯ ಡಿ.ಎಲ್.ನರಸಿಂಹಚಾರ್, ಗುರುಗಳಾಗಿದ್ದರು. ಪ್ರಸಿದ್ಧ ಸಾಹಿತಿ ಹಂಪ ನಾಗರಾಜಯ್ಯರೊಡನೆ ೧೯೬೧ ರಲ್ಲಿ ವಿವಾಹವಾದರು. ಇವರು ಬಹುಮುಖ ಸಾಹಿತ್ಯ ಕೃಷಿ ನಡೆಸಿದ್ದಾರೆ. ಪ್ರಸ್ತುತ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಕೃತಿಗಳು:
ಅಕ್ಕಮಹಾದೇವಿ, ಬದ್ದವಣ, ಬಿತ್ತರ, ಬೊಗಸೆ, ಬೊಮ್ಮಳ, ಚಾಮುಂಡರಾಯ ಪುರಾಣ, ಜಾತಿ ಮೀಮಾಂಸೆ, ಮಕ್ಕಳೊಡನೆ ಮಾತುಕತೆ, ವೀರವನಿತೆ ಓಬ್ಬವ್ವ, ಹೆಳವನಕಟ್ಟೆ ಗಿರಿಯಮ್ಮ, ಸುಕುಮಾರ ಚರಿತೆ ಸಂಗ್ರಹ, ಭರತೇಶ ವೈಭವ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ನಕ್ಕಿತು ಹಾಲಿನ ಬಟ್ಟಲು, ಜನ್ನ, ಡಾ.ಅಂಬೇಡ್ಕರ್, ಬಾಂದಳ, ಬಾಸಿಂಗ ಮುಂತಾದವು.

ಗೌರವ, ಪ್ರಶಸ್ತಿ -ಪುರಸ್ಕಾರಗಳು
೧೯೯೭ ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ
೧೯೮೫ ರಲ್ಲಿ ರಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
೧೯೯೯ ರಲ್ಲಿ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ,
೧೯೯೬ ರಲ್ಲಿ ಸಾವಿತ್ರಮ್ಮ ದೇಜಗೌ ಪ್ರಶಸ್ತಿ,
೨೦೦೩ ರಲ್ಲಿ ಡಾ|| ಅನುಪಮಾ ಪ್ರಶಸ್ತಿ,
೧೯೯೦ ರಲ್ಲಿ ಬಾಬಾ ಆಮ್ಟೆ, ರಾಷ್ಟ್ರೀಯ ಪ್ರಶಸ್ತಿ,
೨೦೦೩ ರಲ್ಲಿ ಮೂಡಬಿದರೆಯಲ್ಲಿ ಜರುಗಿದ ೭೧ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆಯನ್ನು ವಹಿಸಿದ್ದರು.
 

ಕಯ್ಯಾರ್ ಕಿಞ್ಞಣ್ಣರೈ
ಕಯ್ಯಾರ ಕಿಞ್ಞಣ್ಣ ರೈ ಅವರು ೧೯೧೫ ರ ಸೆಪ್ಟೆಂಬರ್ ೮ ರಂದು ಈಗಿನ ಕೇರಳ ರಾಜ್ಯದಲ್ಲಿರುವ ಕಾಸರಗೋಡು ಜಿಲ್ಲೆಯ ಪೆರಡಾಲದಲ್ಲಿ ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ಕಯ್ಯಾರ ದೈಯ್ಯಕ್ಕ, ದುರ್ಗಾದಾಸ ಇವರ ಕಾವ್ಯನಾಮ ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢಶಾಲಾ ಶಿಕ್ಷಣವು ಪೆರಡಾಲದಲ್ಲಿ ನಡೆಯಿತು. ಇವರಿಗೆ ಇಂಗ್ಲಿಷ್ ಶಿಕ್ಷಣ ಪಡೆಯಬೇಕೆಂಬ ಆಸೆ ಇತ್ತು. ತಂದೆ ತೀರಿಕೊಂಡಿದ್ದರಿಂದ ಅದಕ್ಕೆ ಅಡಚಣೆಯುಂಟಾಯಿತು. ಸಂಸ್ಕೃತ ವಿದ್ಯಾಲಯವನ್ನು ಸೇರಿ ಸಂಸ್ಕೃತ ಮತ್ತು ಕನ್ನಡಗಳನ್ನು ಚೆನ್ನಾಗಿ ಅಭ್ಯಸಿಸಿದರು. ಅದರಲ್ಲಿ ವಿಧ್ವಾನ್ ಪದವಿಗಳಿಸಿದರು. ಪತ್ರಿಕೋದ್ಯಮದ ಕಡೆಗೆ ಆಕರ್ಷಿತರಾಗಿ ಮಂಗಳೂರಿನ ಸ್ವದೇಶಾಭಿಮಾನಿ ಪತ್ರಿಕೆಗೆ ದುಡಿದರು. ಬಿ.ಎ. ಮತ್ತು ಎಂ.ಎ. ಪದವಿಗಳನ್ನು ಪಡೆದುಕೊಂಡು ಅಧ್ಯಾಪಕ ತರಬೇತಿಯನ್ನು ಪಡೆದುಕೊಂಡರು. ತರಬೇತಿ ಮುಗಿದ ನಂತರ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. ಕರ್ನಾಟಕದ ಹೊರಗಿದ್ದು ಕನ್ನಡಕ್ಕಾಗಿ ದುಡಿಯುತ್ತಿರುವವರಲ್ಲಿ ರೈ ಅವರು ಪ್ರಮುಖರು. ಸಾಹಿತ್ಯ ಕ್ಷೇತ್ರಕ್ಕೆ ಇವರ ಕಾಣಿಕೆ ಮಹತ್ವ ಪೂರ್ಣವಾದುದ್ದು. ದೇಶಕ್ಕಾಗಿ ಮತ್ತು ನಾಡಿಗಾಗಿ ಹೋರಾಡಿದ, ಹೋರಾಡುತ್ತಿರುವ ನಿಷ್ಟಾವಂತ ಸಾಹಿತಿ. ಇವರು ಗಾಂಧೀಜಿಯವರ ಕಟ್ಟಾ ಅಭಿಮಾನಿಗಳು. ಇವರು ಸಾಹಿತಿಯಷ್ಟೇ ಅಲ್ಲ ವಿಮರ್ಶಕರು ಹೌದು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕಯ್ಯಾರ ಕಿಞ್ಞಣ್ಣರೈ ಮಹತ್ವದ ಪಾತ್ರವಹಿಸಿದ್ದರು. ಕಾಸರಗೋಡು ಕರ್ನಾಟಕ ಪ್ರಾಂತೀಕರಣ ಸಮಿತಿಯ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಕೃತಿಗಳು.
ರಾಷ್ಟ್ರಕವಿ ಗೋವಿಂದ ಪೈ, ಕವಿ ಗೋವಿಂದ ಪೈ ಸ್ಮೃತಿ-ಕೃತಿ, ವ್ಯಾಕರಣ ಮತ್ತು ಪ್ರಬಂಧ, ಸಾಹಿತ್ಯ ದೃಷ್ಟಿ ಮಲಯಾಳಂ ಸಾಹಿತ್ಯ ಚರಿತ್ರಂ, ಮಹಾಕವಿ ಗೋವಿಂದ ಪೈ, ಸಂಸ್ಕೃತಿಯ ಹೆಗ್ಗುರುತು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಮಕ್ಕಳ ಪದ್ಯಮಂಜರಿ, ವಿರಾಗಿಣಿ, ಅನ್ನದೇವರು, ರತ್ನರಾಶಿ, ಪರಶುರಮ, ಶತಮಾನದಗಾನ, ಪಂಚಮೀ, ಕೊರಗ ಮತ್ತು ಕೆಲವು ಕವನಗಳು, ಪ್ರತಿಭಾಪಯಸ್ವಿನಿ, ಎನಪ್ಪೆ ತುಳುವಪ್ಪೆ, ಗಂಧವತಿ, ದುಡಿತವೇ ನನ್ನ ದೇವರು, ಲಕ್ಷ್ಮೀಶನ ಕಥೆಗಳು, ನಾರಾಯಣ ಕಿಲ್ಲೆ, ಎ.ಬಿ.ಶೆಟ್ಟಿ ಕಾರ್ನಾಡ್ ಸದಾಶಿವರಾವ್ ಮುಂತಾದವು.

ಗೌರವ, ಪ್ರಶಸ್ತಿ ಪುರಸ್ಕಾರಗಳು,
೧೯೬೯ ರಲ್ಲಿ ಕೇಂದ್ರ ಸರ್ಕಾರದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಸ್ವಾತಂತ್ರ್ಯ ಯೋಧ ಪ್ರಶಸ್ತಿ ಲಭಿಸಿದೆ.
೧೯೮೫ ರಾಜ್ಯೋತ್ಸವ ಪ್ರಶಸ್ತಿ
೧೯೮೯ ಅಖಿಲ ಭಾರತ ತುಳು ಸಮ್ಮೇಳನದ ಸನ್ಮಾನ ಪ್ರಶಸ್ತಿ
೧೯೯೭ ರಲ್ಲಿ ಮಂಗಳೂರಿನಲ್ಲಿ ಜರುಗಿದ ೬೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಗೌರವಿಸಿತ್ತು.

ಎಂ.ಎಂ. ಕಲಬುರ್ಗಿ
ಎಂ.ಎಂ. ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗುಬ್ಬೇವಾಡದಲ್ಲಿ ೧೯೩೮ರ ನವೆಂಬರ್ ೨೮ ರಂದು ಜನಿಸಿದರು. ತಂದೆ ಕಲಬುರ್ಗಿ ಮಡಿವಾಳಪ್ಪ ಸಂಗಪ್ಪ, ತಾಯಿ ಕಲಬುರ್ಗಿ ಗುರಮ್ಮ ಮಡಿವಾಳಪ್ಪ. ಇವರು ಬಿಜಾಪುರದ ವಿಜಯಾ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದುಕೊಂಡರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ೧೯೭೦ ರಲ್ಲಿ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಮಹಾಪ್ರಂಧಕ್ಕೆ ಪಿ.ಎಚ್.ಡಿ. ಪದವಿ ಪಡೆದುಕೊಂಡರು. ಇವರು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ೧೯೬೨ರಲ್ಲಿ ವೃತ್ತಿಜೀವನ ಆರಂಭಿಸಿದರು. ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ೧೯೭೦ ರಲ್ಲಿ ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಮಹಾಪ್ರಂಧಕ್ಕೆ ಪಿಎಚ್‌ಡಿ ಪದವಿ ಪಡೆದುಕೊಂಡರು. ಇವರು ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಅಧ್ಯಾಪಕರಾಗಿ ೧೯೬೨ರಲ್ಲಿ ವೃತ್ತಿಜೀವನ ಆರಂಭಿಸಿದರು. ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವನ್ನು ಸೇರಿ, ಇಲ್ಲಿಯೇ ಪ್ರಾಧ್ಯಾಪಕರಾಗಿ, ಅಧ್ಯಾಪಕರಾಗಿ ೩೨ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು. ಈ ವಿಷಯಗಳಿಗೆ ಸಂಬಂಧಿಸಿದಂತೆ. ೪೬ ಕ್ಕೂ ಹೆಚ್ಚು ಗ್ರಂಥಗಳನ್ನು ೨೦೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಇವರ ಸಂಪಾದಕತ್ವದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಕೃತಿಗಳು
ಶಾಸನ ಸಂಪದ, ಕನ್ನಡ ಸಂಶೋಧನಾ ಶಾಸ್ತ್ರ, ಶಾಸನಸೂಚಿ, ವಿಜಾಪುರ ಜಿಲ್ಲೆಯ ಶಾಸನ ಸೂಚಿ, ಧಾರವಾಡ ಜಿಲ್ಲೆಯ ಶಾಸನಗಳು, ಶಾಸನ ಸೂಕ್ತಿ ಸುರ್ಧಾಣವ, ಬಸವಣ್ಣನವರನ್ನು ಕುರಿತ ಶಾಸನಗಳು, ಶಾಸನಗಳಲ್ಲಿ ಶಿವಶರಣರು, ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ, ಬಸವಣ್ಣನವರ ಟೀಕಿನ ವಚನಗಳು, ಕೊಂಡಗುಳಿ ಕೇಶಿರಾಜನ ಕೃತಿಗಳು, ಅಧ್ಯಯನ ಲಘುಕೃತಿಗಳು, ಮುಂತಾದವರು.

ಗೌರವ, ಪ್ರಶಸ್ತಿ-ಪುರಸ್ಕಾರಗಳು
ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ ಕೃತಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್
ಶಾಸನಗಳಲ್ಲಿ ಶಿವಶರಣರು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ;
೧೯೯೦ ರಲ್ಲಿ ದೇಜಗೌ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ
೧೯೯೧ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೬ರಲ್ಲಿ ಪಂಪ ಪ್ರಶಸ್ತಿ
೧೯೯೭ ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ತಜ್ಞ ಪ್ರಶಸ್ತಿ
ಶ್ರೀ ಜಯ ಚಾಮರಾಜ ಒಡೆಯರ ಪಾರಿತೋಷಕವನ್ನು ಪಡೆದಿದ್ದಾರೆ.
ಮಾಗ್ -೪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.
 

ಕೆ.ಜಿ. ಕುಂದಣಗಾರ
ಕೆ.ಜಿ.ಕುಂದಣಗಾರ ಅವರು ಬೆಲಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ೧೮೯೨ ರ ಆಗಸ್ಟ್ ೧೪ರಂದು ಜನಿಸಿದರು. ತಂದೆ ಗಿರಿಯಪ್ಪ ಇವರ ಪೂರ್ಣ ಹೆಸರು ಕಲ್ಲಪ್ಪ ಕಾರಿಯಪ್ಪ ಕುಂದಣಗಾರ ಕೇಶವ ಇವರ ಕಾವ್ಯನಾಮ. ಇವರದು ಅಕ್ಕಸಾಲಿಗ ಬಡ ಕುಟುಂಬವಾಗಿತ್ತು. ಆರಂಭಿಕ ಶಿಕ್ಷಣವನ್ನು ಇವರು ಕೌಜಲಗಿಯಲ್ಲಿ ಮುಗಿಸಿ, ಪ್ರೌಢಶಿಕ್ಷಣಕ್ಕಾಗಿ ಬೆಳಗಾವಿಗೆ ಹೋದರು. ತದನಂತರ ಧಾರವಾಡದ ವಿಕ್ಟೋರಿಯಾ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೧೯ರಲ್ಲಿ ಬಿ.ಎ. ಪದವಿ ಪಡೆದ ಗೋಕಾಕದ ವಿ.ವಿ. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ಆರಂಭಿಕ ವೃತ್ತಿಜೀವನವನ್ನು ಆರಂಭಿಸಿದರು. ಇವರು ಸ್ನಾತಕೋತ್ತರ ಪದವಿ ಪಡೆಯಲು ಹಳಗನ್ನಡ ಕಾವ್ಯಗಳ ವ್ಯಾಸಂಗ ಹಾಗೂ ಸಂಸ್ಕೃತ ಭಾಷೆಯ ಅಧ್ಯಯನಕ್ಕೂ ತೊಡಗಿದರು. ಕೊಲ್ಲಾಪುರ, ಗೋಕಾಕದ ಫ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಅನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಹಾಗೂ ಕೊಲ್ಲಾಪುರದ ರಾಜಾರಾಮ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ೧೯೪೮ ರಲ್ಲಿ ನಿವೃತ್ತರಾದರು ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿಯೂ ಪ್ರಾಧ್ಯಾಪಕರಾಗಿದ್ದರು. ಕೊಲ್ಲಾಪುರದಲ್ಲಿ ಕನ್ನಡದ ಬೆನ್ನೆಲುಬಾಗಿದ್ದ ಕುಂದಣಗಾರರು ಮುಂಬೈಯಲ್ಲಿ ಸೇರಿದ ಪ್ರಾಚ್ಯ ಮಹಾಸಭೆಯ ಕನ್ನಡ ವಿಭಾಗದ ಅಧ್ಯಕ್ಷರು ಇವರಾಗಿದ್ದರು. ಇವರು ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದವರು. ಧಾರವಾಡದ ವಾಗ್ಭೂಷಣ ಪತ್ರಿಕೆಯಲ್ಲಿ ಹಲವು ಕಾಲ ಕಾರ್ಯ ನಿರ್ವಹಿಸಿದರು. ಹಾಗೂ ಬೆಳಗಾವಿಯ ಜಿನವಿಜಯ ಪತ್ರಿಕೆಗಳಿಗೆ ಕೆಲವು ಕಾಲ ಸಂಪಾದಕರಾಗಿದ್ದರು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ವಿದ್ವಾಂಸರು ಇವರು ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ಕನ್ನಡ ನಿಘಂಟು ಹಾಗೂ ಕನ್ನಡ ನಿಘಂಟಿನ ಸಂಪಾದಕ ಮಂಡಳಿಯ ಸದಸ್ಯರಾಗಿ ಇವರು ಕಾರ್ಯ ನಿರ್ವಹಿಸಿದರು. ಇವರಿಗೆ ಕನ್ನಡ, ಇಂಗ್ಲೀಷ್, ಮರಾಠಿ ಪಾಲಿ, ಅರ್ಧಮಾಗದಿ ಭಾಷೆಗಳಲ್ಲೂ ಒಳ್ಳೆಯ ಪರಿಶ್ರಮವಿತ್ತು. ಇವರು ೧೯೬೫ ರ ಆಗಸ್ಟ್ ೨೨ ರಂದು ನಿಧನರಾದರು.

ಕೃತಿಗಳು.
ಸರಸ್ವತಿ, ಲೀಲಾವತಿ ಪ್ರಬಂದ, ಪೂರ್ವಪುರಾಣ, ಆದಿಪುರಾಣ, ಕುಮುದೇಂದು ರಾಮಾಯಣ, ಹರಿಹರದೇವ, ಸಮ್ ನೋಟ್ಸ್ ಆನ್ ಶ್ರೀಮಹಾಲಕ್ಷ್ಮೀ ಟೆಂಪಲ್ (ಇಂಗ್ಲಿಷ್) ಇನ್ಸ್‌ಕ್ರಿಪ್ಷನ್ ಇನ್ ನಾರ್ದರ್ನ್ ಕರ್ನಾಟಕ ಅಂಡ್ ಕೊಲ್ಲಾಪುರ ಸ್ಟೇಟ್, ಮಹದೇವಿಯಕ್ಕ, ಹರಿಹರ ದೇವಪ್ರಶಸ್ತಿ ಮುಂತಾದವು.
ಗೌರವ, ಪ್ರಶಸ್ತಿ-ಪುರಸ್ಕಾರಗಳು
೧೯೬೧ ರಲ್ಲಿ ಗದಗದಲ್ಲಿ ಜರುಗಿದ ೪೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
೧೯೬೧ರಲ್ಲಿ ಅಬಿಮಾನಿಗಳು ಕುಂದಣ ಎಮಬ ಅಬಿನಂದನಾ ಗ್ರಂಥವನ್ನು ಅರ್ಪಿಸಿದ್ದಾರೆ.

   ಮುಂದಿನಪುಟಕ್ಕೆ